ಬೆಂಗಳೂರು:ಬಕ್ರೀದ್ ಪ್ರಯುಕ್ತ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಂಡರು. ವಸತಿ ಸಚಿವ ಜಮೀರ್ ಅಹಮದ್ ಸೇರಿ ಸಮುದಾಯದ ಮುಖಂಡರು, ಹಿರಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭ ಮಾತನಾಡಿದ ಸಿಎಂ, ಇಡೀ ಮನುಕುಲಕ್ಕೆ ಒಳ್ಳೆಯದಾಗಲಿ ಎಂದು ನೀವೆಲ್ಲ ಇಲ್ಲಿ ಸೇರಿ ಪ್ರಾರ್ಥನೆ ಸಲ್ಲಿಸಿದ್ದೀರಿ. ಇದು ಭಾಷಣ ಮಾಡುವ ಸಭೆ ಅಲ್ಲ. ಈಗಾಗಲೇ ಧರ್ಮ ಗುರುಗಳು ಪ್ರಾರ್ಥನೆಯನ್ನು ಮಾಡಿ, ನಿಮ್ಮನ್ನೆಲ್ಲಾ ಭಾಗವಹಿಸುವಂತೆ ಮಾಡಿದ್ದಾರೆ. ಬಕ್ರೀದ್ ಹಬ್ಬ ತ್ಯಾಗ ಮಾಡುವ ಒಂದು ಹಬ್ಬ. ಈ ಹಬ್ಬದ ದಿನ ಚಾಮರಾಜಪೇಟೆ ಭಾಗದ ಎಲ್ಲ ಮುಸಲ್ಮಾನ್ ಬಾಂಧವರು ಸೇರಿ ಪ್ರಾರ್ಥನೆ ಮಾಡಿದ್ದೀರಿ. ನಾನು ಸಹ ಅತ್ಯಂತ ಸಂತೋಷದಿಂದ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಮುಸಲ್ಮಾನ್ ಬಾಂಧವರು ಮತ್ತು ಎಲ್ಲರಿಗೂ ಬಕ್ರೀದ್ ಹಬ್ಬದ ಶುಭಾಶಯ ಹೇಳಲು ಬಯಸುತ್ತಿದ್ದೇನೆ. ನಾವೆಲ್ಲರೂ ಕೂಡ ಮನುಷ್ಯರು. ಯಾವುದೇ ಧರ್ಮ, ಜಾತಿಗೆ ಸೇರಿದ್ದರೂ ಸಹ ಮಾನವ ಧರ್ಮ ಹೊಂದಿರಬೇಕು. ಪರಸ್ಪರ ಪ್ರೀತಿ ವಿಶ್ವಾಸದಿಂದ ಇರಬೇಕು. ದೇವರು ಬುದ್ಧಿ ಕೊಟ್ಟಿದ್ದಾನೆ, ಉಪಯೋಗಿಸಿಕೊಳ್ಳಬೇಕು. ನಮ್ಮನಮ್ಮಲ್ಲೇ ದ್ವೇಶ ವೈರತ್ವ ಹುಟ್ಟುಹಾಕುವ ಕೆಲ ಶಕ್ತಿಗಳು ನಮ್ಮ ಮಧ್ಯದಲ್ಲಿವೆ. ಅವರಿಗೆ ಬೆಲೆ ಕೊಡಬಾರದು. ಮನುಷ್ಯರಂತೆ ಬದುಕುವ ವಾತಾವರಣ ಸಮಾಜದಲ್ಲಿ ನಿರ್ಮಾಣ ಆದರೆ, ರಾಜ್ಯ ಅಭಿವೃದ್ಧಿ ಆಗುತ್ತದೆ. ಎಲ್ಲರಿಗೂ ಸದ್ಬುದ್ಧಿ ಕೊಡಲಿ ಎಂದು ಹಾರೈಸಿದರು.
ಬಕ್ರೀದ್ ಆಚರಣೆ:ಇಸ್ಲಾಂ ಧರ್ಮವನ್ನು ನಂಬುವ ಜನರ ಪ್ರಮುಖ ಹಬ್ಬಗಳಲ್ಲಿ ಬಕ್ರೀದ್ ಕೂಡ ಒಂದು. ಈ ಹಬ್ಬವನ್ನು ತ್ಯಾಗದ ಸಂಕೇತವೆಂದು ಆಚರಿಸಲಾಗುತ್ತದೆ. ಇತ್ತೀಚೆಗಷ್ಟೇ ಜಿಲ್ಹಿಜ್ ತಿಂಗಳ ಚಂದ್ರ ದರ್ಶನವಾಗಿದ್ದು, ಇದೀಗ ಬಕ್ರೀದ್ ದಿನವು ಆಚರಣೆಗೆ ಬಂದಿದೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ, ಜಿಲ್ಹಿಜ್ ತಿಂಗಳನ್ನು ವರ್ಷದ ಕೊನೆಯ ತಿಂಗಳು ಎಂದು ಕರೆಯಲಾಗುತ್ತದೆ. ಅದರ ಮೊದಲ ದಿನಾಂಕವು ಬಹಳ ಮುಖ್ಯವಾಗಿದೆ. ಈ ದಿನ, ಚಂದ್ರನ ದರ್ಶನದೊಂದಿಗೆ, ಬಕ್ರೀದ್ ಅಥವಾ ಈದ್ ಉಲ್-ಅಧಾ ದಿನಾಂಕವನ್ನು ಘೋಷಿಸಲಾಗುತ್ತದೆ. ಚಂದ್ರ ದರ್ಶನವಾದ ಹತ್ತನೇ ದಿನದಂದು ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತದೆ.