ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಜಾಲ ಪ್ರಕರಣದ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಬೆಂಗಳೂರಿನ ಎನ್ಡಿಪಿಎಸ್ ವಿಶೇಷ ಕೋರ್ಟ್ ವಜಾಗೊಳಿಸಿ ಆದೇಶಿಸಿದೆ.
ಡ್ರಗ್ಸ್ ಜಾಲದಲ್ಲಿ ಭಾಗಿಯಾದ ಆರೋಪದಡಿ ಬಂಧಿತರಾಗಿರುವ ಪ್ರಶಾಂತ್ ರಂಕಾ, ನಿಯಾಜ್ ಮೊಹಮ್ಮದ್, ವೈಭವ್ ಜೈನ್, ಪ್ರತೀಕ್ ಶೆಟ್ಟಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಹಾಗೆಯೇ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗುವ ಭೀತಿಯಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳಾದ ಅಭಿಸ್ವಾಮಿ, ಪ್ರಶಾಂತ್ ರಾಜು ಕೂಡ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಈ ಎಲ್ಲ ಅರ್ಜಿಗಳನ್ನು ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಎನ್ಡಿಪಿಎಸ್ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿದ ನ್ಯಾ. ಶೀನಪ್ಪ ಅಂತಿಮವಾಗಿ ಅರ್ಜಿ ವಜಾಗೊಳಿಸಿ ತೀರ್ಪು ನೀಡಿದರು.
ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ ಹಾಗೂ ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದು, ಈ ಹಂತದಲ್ಲಿ ಜಾಮೀನು ನೀಡಿದರೆ ತನಿಖೆಗೆ ಹಿನ್ನೆಡೆಯಾಗುತ್ತದೆ ಎಂಬ ಪ್ರಾಸಿಕ್ಯೂಷನ್ ಪರ ವಕೀಲರ ವಾದ ಪುರಸ್ಕರಿಸಿ, ಆರೋಪಿಗಳ ಕೋರಿಕೆಯನ್ನು ಕೋರ್ಟ್ ತಿರಸ್ಕರಿಸಿತು.
ಈಗಾಗಲೇ ಡ್ರಗ್ಸ್ ಲಿಂಕ್ ಆರೋಪದಡಿ ನಟಿಯರಾದ ರಾಗಿಣಿ, ಸಂಜನಾ ಹಾಗೂ ಇವರ ಸ್ನೇಹಿತರು ಸೇರಿದಂತೆ ಹಲವು ಆರೋಪಿಗಳನ್ನು ತನಿಖಾಧಿಕಾರಿಗಳು ಬಂಧಿಸಿದ್ದಾರೆ. ಪ್ರಕರಣದಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ಇರುವ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಕೂಡ ತನಿಖೆಗೆ ಇಳಿದಿದೆ.