ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಬರೆದಿಟ್ಟ ಡೆತ್‌ನೋಟ್‌ನಲ್ಲಿ ಆರೋಪಿ ಹೆಸರಿದೆ ಎಂಬ ಕಾರಣಕ್ಕೆ ಆತನೇ ಆತ್ಮಹತ್ಯೆಗೆ ಪ್ರಚೋದಿಸಿದ್ದ ಎಂದು ನಿರ್ಧರಿಸಿ ಜಾಮೀನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಆತ್ಮಹತ್ಯೆಗೆ ಶರಣಾಗಿದ್ದ ಮಹಿಳೆಯೊಬ್ಬರು ಸಾವಿಗೂ ಮುನ್ನ ಬರೆದಿದ್ದ ಡೆತ್ ನೋಟ್‌ನಲ್ಲಿ ಹೆಸರಿದ್ದ ಕಾರಣಕ್ಕೆ ಬಂಧನಕ್ಕೆ ಒಳಗಾಗಿದ್ದ ಬೆಂಗಳೂರಿನ ಉದ್ಯಮಿ ಬಿ. ಕೆ. ಪದ್ಮನಾಭ ರೆಡ್ಡಿ ಸಲ್ಲಿಸಿದ್ದ ಜಾಮೀನು ಅರ್ಜಿ ತೀರ್ಪಿನಲ್ಲಿ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಹಾಗೆಯೇ ಆರೋಪಿ ಉದ್ಯಮಿಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನೆಲೆ :ನಗರದ ವನಜಾಕ್ಷಿ ಎಂಬುವರು 2020ರ ಜುಲೈ 28ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಮೃತ ಮಹಿಳೆ ಕೊಠಡಿಯಲ್ಲಿ ಪತ್ತೆಯಾಗಿದ್ದ ಡೆತ್‌ನೋಟ್‌ನಲ್ಲಿ ಪದ್ಮನಾಭ ರೆಡ್ಡಿ ಸೇರಿ ಮೂವರ ಹೆಸರಿತ್ತು. ಆ ಬಳಿಕ ತಾಯಿ ಸಾವಿಗೆ ಇವರೇ ಕಾರಣ ಎಂದು ಆರೋಪಿಸಿದ್ದ ಪುತ್ರ ಹೆಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ್ದ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 306ರ ಅಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಎಫ್ಐಆರ್ ದಾಖಲಿಸಿ, ಪದ್ಮನಾಭ ರೆಡ್ಡಿ ಅವರನ್ನು ಬಂಧಿಸಿದ್ದರು. ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಸೆಷನ್ಸ್ ಕೋರ್ಟ್ ಮನವಿ ವಜಾಗೊಳಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಆತ್ಮಹತ್ಯೆಗೆ ಪ್ರೇರೇಪಿಸಿದ್ದ ಆರೋಪ:
ವಿಚಾರಣೆ ವೇಳೆ ವಾದ ಮಂಡಿಸಿದ್ದ ಪ್ರಾಸಿಕ್ಯೂಷನ್ ಪರ ವಕೀಲರು, ಮೃತ ಮಹಿಳೆ ಹಾಗೂ ಪದ್ಮನಾಭ ರೆಡ್ಡಿ ನಡುವೆ 2002ರಿಂದಲೂ ಹಣಕಾಸು ವ್ಯವಹಾರವಿತ್ತು. ಆದರೆ, ಮಹಿಳೆಗೆ ನೀಡಬೇಕಿದ್ದ ಹಣ ನೀಡಲು ಸತಾಯಿಸುತ್ತಿದ್ದ ರೆಡ್ಡಿ, ಹಣ ಹಿಂದಿರುಗಿಸುವಂತೆ ಕರೆ ಮಾಡಿದ್ದಾಗ ‘ನಾನು ದುಡ್ಡು ಕೊಡುವುದಿಲ್ಲ. ನಿನಗಿಷ್ಟ ಬಂದ ಹಾಗೆ ಮಾಡಿಕೋ. ಬೇಕಿದ್ದರೆ ನೀನು ಹೋಗಿ ಸಾಯಿ’ ಎಂದು ಹೇಳಿದ್ದರು ಎಂದು ಆರೋಪಿಸಿದ್ದರು. ಇದರಿಂದಾಗಿಯೇ ಮಹಿಳೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವನ್ನು ಗಮನಿಸಿದರೆ, ರೆಡ್ಡಿಯೇ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದು ಸಾಬೀತಾಗುತ್ತದೆ. ಡೆತ್ ನೋಟ್‌ನಲ್ಲಿ ಆರೋಪಿ ಹೆಸರು ಕೂಡಾ ಇದೆ. ಇದು ಮಹಿಳೆಯ ಸಾವಿಗೆ ಆತನೇ ಕಾರಣ ಎಂಬುದಕ್ಕೆ ಪ್ರಮುಖ ಸಾಕ್ಷ್ಯವಾಗಿದೆ. ಆದ್ದರಿಂದ, ಜಾಮೀನು ಅರ್ಜಿ ವಜಾಗೊಳಿಸಬೇಕು ಎಂದು ಪ್ರಾಸಿಕ್ಯೂಷನ್ ಪರ ವಕೀಲರು ವಾದಿಸಿದ್ದರು.
ಹೆಸರಿದ್ದಾಕ್ಷಣ ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆ ಎನ್ನುವಂತಿಲ್ಲ:
ಇನ್ನು ಪ್ರಾಸಿಕ್ಯೂಷನ್ ವಾದ ತಳ್ಳಿಹಾಕಿರುವ ನ್ಯಾಯಮೂರ್ತಿ ಬಿ. ಎ. ಪಾಟೀಲ ಅವರಿದ್ದ ಪೀಠ, ಮೃತ ಮಹಿಳೆ ಹಾಗೂ ಅರ್ಜಿದಾರರ ನಡುವೆ ಹಣಕಾಸು ವ್ಯವಹಾರ ಯಾವಾಗ ನಡೆದಿತ್ತು?. ಮಹಿಳೆ ಯಾವಾಗ ಕರೆ ಮಾಡಿದ್ದರು?. ಅವರಿಬ್ಬರ ನಡುವೆ ಯಾವ ರೀತಿಯ ಸಂಭಾಷಣೆ ನಡೆದಿತ್ತು ಎಂಬುದನ್ನು ನಿಖರವಾಗಿ ಡೆತ್ ನೋಟ್‌ನಲ್ಲಿ ವಿವರಿಸಿಲ್ಲ. ಡೆತ್ ನೋಟ್‌ನಲ್ಲಿ ಹೆಸರಿದೆ ಎಂಬ ಮಾತ್ರಕ್ಕೆ ಅರ್ಜಿದಾರರೇ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ. ಅವರ ಮಾತಿನಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ, ಕಳೆದ ಜುಲೈ 28 ರಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡ ದಿನ ಮಧ್ಯಾಹ್ನ ಮಗನ ಜೊತೆ ಊಟ ಮಾಡಿದ್ದಾರೆ. ಈ ವೇಳೆ, ಅರ್ಜಿದಾರನ ಜೊತೆ ಇದ್ದ ಹಣಕಾಸು ವ್ಯವಹಾರ ಕುರಿತ ಯಾವುದೇ ವಿಚಾರವನ್ನು ಮಗನೊಂದಿಗೆ ಚರ್ಚಿಸಿಲ್ಲ. ಡೆತ್ ನೋಟ್ ಜತೆಗೇ ಪ್ರಕರಣಕ್ಕೆ ಸಂಬಂಧಿಸಿದ ಇತರ ವಿಚಾರಗಳು ಕೂಡ ನ್ಯಾಯಾಲಯದ ವಿಚಾರಣೆಯಲ್ಲಿ ಪರಿಶೀಲಿಸಬೇಕಾಗುತ್ತದೆ. ಅಲ್ಲಿವರೆಗೂ, ಡೆತ್ ನೋಟ್‌ನಲ್ಲಿ ಹೆಸರಿದೆ ಎಂಬ ಕಾರಣಕ್ಕೆ ಜಾಮೀನು ನಿರಾಕರಿಸುವುದು ಸೂಕ್ತವಲ್ಲ ಎಂದು ಹೈಕೋರ್ಟ್ ತನ್ನ ಜಾಮೀನು ನೀಡುವ ನಿಲುವಿಗೆ ಕಾರಣ ನೀಡಿದೆ.