ಬೆಂಗಳೂರು :ಜೀವನೋಪಾಯಕ್ಕೆ ಸಾಂಪ್ರದಾಯಿಕ ವೃತ್ತಿ ಅವಲಂಬಿಸಿರುವ ವಿವಿಧ ಸಮುದಾಯಗಳ ಮುಖಂಡರು ಇಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕೊರೊನಾ ಪ್ಯಾಕೇಜ್‍ನಲ್ಲಿ ಸರ್ಕಾರ ತಮ್ಮನ್ನು ಕಡೆಗಣಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ನಿನ್ನೆ ಘೋಷಣೆ ಮಾಡಿರುವ ಪ್ಯಾಕೇಜ್‍ನಲ್ಲಿ ಸವಿತಾ ಸಮಾಜ, ನೇಕಾರರು ಹಾಗೂ ಮಡಿವಾಳ ಸಮುದಾಯದವರಿಗೆ ಮಾತ್ರ ನೆರವು ಘೋಷಣೆ ಮಾಡಿದ್ದಾರೆ. ಆದರೆ, ಆ ವರ್ಗದವರಿಗೂ ನೆರವು ಸೂಕ್ತ ಪ್ರಮಾಣದಲ್ಲಿ ಸಿಕ್ಕಿಲ್ಲ ಎಂದು ಮುಖಂಡರು ಹೇಳಿದರು.
ಅಖಿಲ ಕರ್ನಾಟಕ ಗಾಣಿಗ ಮಹಾಸಭಾ, ಭಾವಸಾರ ಕ್ಷತ್ರಿಯ ಸಮಾಜ (ದರ್ಜಿಗಳು) ವಿಶ್ವಕರ್ಮ ಸೇವಾ ಸಮಿತಿ ಸೋಮವಂಶ ಆರ್ಯ ಕ್ಷತ್ರಿಯ ಸೇವಾ ಸಂಘ, ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಮಹಾ ಒಕ್ಕೂಟ, ಅಲೆಮಾರಿಗಳ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಸಿದ್ದರಾಮಯ್ಯ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮನವಿ ಪತ್ರಗಳನ್ನು ಸಲ್ಲಿಸಿದರು.
ವಿದ್ಯುತ್ ಮಗ್ಗ ನೇಕಾರರು, ಗಾಣಿಗರು, ಕುಂಬಾರ, ಕಮ್ಮಾರ, ಮೇದರು, ದರ್ಜಿಗಳು, ವಿಶ್ವಕರ್ಮ, ಅಲೆಮಾರಿಗಳು, ಬುಡಕಟ್ಟು ಸಮುದಾಯ, ಉಪ್ಪಾರರು, ಅರ್ಚಕರು, ಮಂಗಳವಾದ್ಯ ನುಡಿಸುವವರು, ಕಲಾವಿದರು, ಛಾಯಾಗ್ರಾಹಕರನ್ನು ಕೊರೊನಾ ಪ್ಯಾಕೇಜ್‍ನಲ್ಲಿ ಸೇರಿಸದಿರುವ ಬಗ್ಗೆ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ಎಂ.ಡಿ. ಲಕ್ಷ್ಮಿನಾರಾಯಣ ಅವರೂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಧನ್ಯವಾದ ಸಲ್ಲಿಸಿದ ಮುಖಂಡರು :