ಬೆಂಗಳೂರು : ವಿಧಾನಸಭೆ ಅಧಿವೇಶನ ನಡೆಯುತ್ತಿರುವ ನಡುವೆಯೇ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ರಾಜ್ಯ ಬಿಜೆಪಿ ಶಾಸಕ ಬಿವೈ ವಿಜಯೇಂದ್ರ ದೆಹಲಿ ಪ್ರವಾಸದಲ್ಲಿದ್ದು, ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿದ್ದಾರೆ. ಪ್ರತಿಪಕ್ಷ ನಾಯಕ ಸ್ಥಾನದ ಆಯ್ಕೆ ಬಾಕಿ ಇರುವ ವೇಳೆ ವಿಜಯೇಂದ್ರ ಹೈಕಮಾಂಡ್ ಭೇಟಿ ರಾಜ್ಯ ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದೆ.
ರಾಜ್ಯ ಬಜೆಟ್ ಅಧಿವೇಶನದಲ್ಲಿ ಬಿಜೆಪಿಯನ್ನು ಸಮರ್ಥಿಸಿಕೊಂಡು, ಕಾಂಗ್ರೆಸ್ ಪಕ್ಷವನ್ನು ಟೀಕಿಸಿ, ಸದನದ ಗಮನ ಸೆಳೆಯುವಂತೆ ಮಾತನಾಡಿದ್ದ ಯಡಿಯೂರಪ್ಪ ಪುತ್ರ ಬಿ. ವೈ ವಿಜಯೇಂದ್ರ ಅಧಿವೇಶನ ಮುಕ್ತಾಯಕ್ಕೂ ಮೊದಲೇ ದಿಢೀರ್ ದೆಹಲಿಗೆ ತೆರಳಿದ್ದಾರೆ. ಬುಧವಾರ ರಾತ್ರಿಯೇ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ ನಡ್ಡಾರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಸದ್ಯ ಪ್ರತಿಪಕ್ಷ ನಾಯಕನ ಸ್ಥಾನ ಖಾಲಿ ಇದ್ದು, ಈ ವಿಚಾರ ಸದನದಲ್ಲಿನ ಹೋರಾಟಕ್ಕೂ ಬಿಜೆಪಿಗೆ ಹಿನ್ನಡೆಯಾಗಿದೆ. ಅಧಿವೇಶನ ಆರಂಭದ ವೇಳೆ ಪ್ರತಿಪಕ್ಷ ನಾಯಕರ ಆಯ್ಕೆ ಮಾಡುವುದಾಗಿ ಹೇಳಿದ್ದ ಹೈಕಮಾಂಡ್ ಅಧಿವೇಶನ ಮುಗಿಯುತ್ತಾ ಬಂದರೂ ನೇಮಕ ಮಾಡಿಲ್ಲ. ಈ ಕುರಿತು ಮಾತುಕತೆ ನಡೆದಿರುವ ಸಾಧ್ಯತೆ ಇದೆ.
ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಮಾರ್ಗದರ್ಶನ: ಈ ಕುರಿತು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ವಿಜಯೇಂದ್ರ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ ಪಿ ನಡ್ಡಾ ಅವರನ್ನು ಬುಧವಾರ ನವದೆಹಲಿಯಲ್ಲಿ ಭೇಟಿ ಮಾಡಿ ಆಶೀರ್ವಾದ ಕೋರಲಾಯಿತು. ವಿಧಾನ ಸಭೆ ಹಾಗೂ ಹೊರಗೆ ‘ಕಾಂಗ್ರೆಸ್ ವೈಫಲ್ಯ ಹಾಗೂ ಜನವಿರೋಧಿ ಕ್ರಮಗಳ’ ವಿರುದ್ಧ ಹೋರಾಟ ರೂಪಿಸುವ ಕುರಿತು ಹಾಗೂ ಲೋಕಸಭಾ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ಪಡೆಯಲಾಯಿತು ಎಂದು ತಿಳಿಸಿದ್ದಾರೆ.