ಕರ್ನಾಟಕ

karnataka

ETV Bharat / state

ಡಿಜೆ ಹಳ್ಳಿ, ಕೆಜಿ ಹಳ್ಳಿ ಕೇಸ್, ಕಾಂಗ್ರೆಸ್ ಪಕ್ಷಕ್ಕೆ ವಿನಾಶಕಾಲೇ ವಿಪರೀತ ಬುದ್ಧಿ: ವಿಜಯೇಂದ್ರ ಕಿಡಿ - ಅಯೋಧ್ಯೆಯ ಶ್ರೀರಾಮಮಂದಿರ

ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಹೇಳಿದ್ದಾರೆ. ಇದೇ ವೇಳೆ ಕೆಜಿ ಹಳ್ಳಿ, ಡಿಜೆ ಹಳ್ಳಿ ಪ್ರಕರಣದ ಆರೋಪಿಗಳ ಬಗ್ಗೆ ಸರ್ಕಾರದ ನಿಲುವನ್ನು ಖಂಡಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ

By ETV Bharat Karnataka Team

Published : Jan 7, 2024, 5:23 PM IST

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ

ಬೆಂಗಳೂರು:ಕಾಂಗ್ರೆಸ್ ಪಕ್ಷವು ವಿನಾಶಕಾಲೇ ವಿಪರೀತ ಬುದ್ಧಿ ಎಂಬ ಮಾದರಿಯಲ್ಲಿ ವರ್ತಿಸುತ್ತಿದೆ. ಡಿಜೆ ಹಳ್ಳಿ, ಕೆಜಿ ಹಳ್ಳಿಯ ಪ್ರಕರಣದ ದೇಶದ್ರೋಹಿಗಳನ್ನು ಮಾಫಿ ಮಾಡುವುದಾದರೆ ರಾಜ್ಯದ ಬೇರೆ ಬೇರೆ ಪೊಲೀಸ್ ಠಾಣೆಯ ಕೇಸು ಎದುರಿಸುವ ದೇಶದ್ರೋಹಿಗಳಿಗೂ ಇದೇ ರೀತಿ ಮಾಡುತ್ತೀರಾ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ ವೈ ವಿಜಯೇಂದ್ರ ಅವರು ಪ್ರಶ್ನಿಸಿದ್ದಾರೆ.

ಶೇಷಾದ್ರಿಪುರಂನಲ್ಲಿ ನಡೆದ ಮನೆಮನೆಗೆ ಮಂತ್ರಾಕ್ಷತೆ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಯೋಧ್ಯೆಯ ಶ್ರೀರಾಮಮಂದಿರ ಲೋಕಾರ್ಪಣೆಯ ಶುಭ ಘಳಿಗೆಯಲ್ಲಿ ನಾವೆಲ್ಲರೂ ಇದ್ದೇವೆ. ಇಡೀ ದೇಶದಲ್ಲಿ ನಾವೆಲ್ಲ ಒಂದು ಎಂಬ ಭಾವನೆ ಮೂಡಿದೆ. ಇಂಥ ಸಂದರ್ಭದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರವು ಅಲ್ಪಸಂಖ್ಯಾತರನ್ನು ಓಲೈಕೆ ಮಾಡುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಲ್ಲ. ಬಿಜೆಪಿ ಸರ್ಕಾರ ಇದ್ದಾಗ ಅಲ್ಪಸಂಖ್ಯಾತರಿಗೆ ಉತ್ತಮ ಯೋಜನೆಗಳನ್ನು ಕೊಟ್ಟಿದ್ದಲ್ಲದೆ, ಸಾಕಷ್ಟು ಅನುದಾನವನ್ನೂ ನೀಡಿದೆ. ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲೂ ತ್ರಿವಳಿ ತಲಾಖ್ ಪದ್ಧತಿಯನ್ನು ರದ್ದು ಮಾಡಿ, ಅಲ್ಪಸಂಖ್ಯಾತ ಮಹಿಳೆಯರಿಗೂ ಗೌರವ ಕೊಡಲಾಗುತ್ತಿದೆ ಎಂದು ವಿಶ್ಲೇಷಿಸಿದರು.

ಇವೆಲ್ಲದರ ಮಧ್ಯೆ ರಾಜ್ಯದ ಕಾಂಗ್ರೆಸ್ ಸರ್ಕಾರವು, ತಾವು ಅಲ್ಪಸಂಖ್ಯಾತರಿಂದಲೇ ಅಧಿಕಾರಕ್ಕೆ ಬಂದಿದ್ದೇವೆ ಎಂಬ ಭಾವನೆಯಲ್ಲಿ ಇದ್ದಂತಿದೆ. ರೈತರಿಗೆ ಬರಗಾಲ ಸಂಬಂಧ ಬೆಳೆ ಪರಿಹಾರ ಕೊಡುತ್ತಿಲ್ಲ. ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಕೊಡುವುದಾಗಿ ಹೇಳುತ್ತಿದ್ದಾರೆ. ಈಗ ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣದಲ್ಲಿ ಯಾವ ದೇಶದ್ರೋಹಿಗಳು ಪೊಲೀಸ್ ಸ್ಟೇಷನ್‍ಗೆ ನುಗ್ಗಿ ಬೆಂಕಿ ಹಚ್ಚುವ ಕೆಲಸ ಮಾಡಿದ್ದರೋ ಅವರನ್ನು ನಿರಪರಾಧಿಗಳು ಅನ್ನುವಂತೆ ಬಿಂಬಿಸುತ್ತಿರುವುದು ನಿಜಕ್ಕೂ ಖಂಡನೀಯ ಮತ್ತು ಅಕ್ಷಮ್ಯ ಅಪರಾಧ ಎಂದರು.

ಇದರ ಮೂಲಕ ಇವರು ಬೇರೆಯವರಿಗೆ ಪ್ರೇರಣೆ ಮತ್ತು ಪ್ರಚೋದನೆ ಕೊಡುತ್ತಿದ್ದಾರೆ ಎಂದು ಟೀಕಿಸಿದರು. ಇಲ್ಲಿ ದೇಶದ್ರೋಹಿಗಳನ್ನು ಮಾಫಿ ಮಾಡುವುದಾದರೆ ರಾಜ್ಯದ ಬೇರೆ ಬೇರೆ ಪೊಲೀಸ್ ಠಾಣೆಯ ಕೇಸು ಎದುರಿಸುವ ದೇಶದ್ರೋಹಿಗಳಿಗೂ ಇದೇ ರೀತಿ ಮಾಡುತ್ತೀರಾ? ಎಂದು ಪ್ರಶ್ನಿಸಿದರು. ಅವರನ್ನೂ ಅಮಾಯಕರು ಎನ್ನುವಿರಾ ಎಂದು ಕೇಳಿದರು.

ಸರ್ಕಾರವು ಅಭಿವೃದ್ಧಿ ಕೆಲಸಗಳನ್ನು ಮಾಡದೆ ಧರ್ಮ ಧರ್ಮಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಆ ಭಗವಂತ ಇವರನ್ನು ಕ್ಷಮಿಸುವುದಿಲ್ಲ. ರಾಜ್ಯದ ಜನರು ನಿಮ್ಮ ಪ್ರತಿಯೊಂದು ನಡವಳಿಕೆಯನ್ನೂ ಗಮನಿಸುತ್ತಿದ್ದಾರೆ. ಡಿ ಕೆ ಶಿವಕುಮಾರ್ ಅವರನ್ನು ಬಗ್ಗುಬಡಿಯಲು, ಅವರ ಸೊಕ್ಕು ಮುರಿಯಲು ಕಾಂಗ್ರೆಸ್‍ನ ಮಹಾನ್ ನಾಯಕರೆಲ್ಲರೂ ಸೇರಿದ್ದಾರೆ. ಡಿ ಕೆ ಶಿವಕುಮಾರ್ ಅವರನ್ನು ಬಲಿ ಹಾಕಲು ಮೂವರು ಡಿಸಿಎಂಗಳ ಯೋಜನೆ ಮುಂದಿಟ್ಟಿದ್ದಾರೆ ಎಂದು ಬಿ ವೈ ವಿಜಯೇಂದ್ರ ಆರೋಪಿಸಿದರು.

ಕೋಮುಗಲಭೆ ಸೃಷ್ಟಿಸಲು ಪುನೀತ್ ಕೆರೆಹಳ್ಳಿಗೆ ಬಿಜೆಪಿ ಫತ್ವಾ ನೀಡಿದೆ ಎಂಬ ಬಿ ಕೆ ಹರಿಪ್ರಸಾದ್ ಟ್ವೀಟ್ ವಿಚಾರಕ್ಕೆ ಕಿಡಿಕಾರಿದ ವಿಜಯೇಂದ್ರ ಅವರು, ಬಿ ಕೆ‌ ಹರಿಪ್ರಸಾದ್ ಅವರನ್ನ ಮಾಧ್ಯಮಗಳು ಗಂಭೀರವಾಗಿ ತೆಗೆದುಕೊಳ್ತಿಲ್ಲ. ಹೀಗಾಗಿ ಮನಬಂದಂತೆ ಮಾತಾಡ್ತಿದ್ದಾರೆ. ಅವರ ಹೇಳಿಕೆಗಳು ಅವರಿಗೇ ಅರ್ಥ ಆಗ್ತಿಲ್ಲ ಅನಿಸುತ್ತೆ. ಆದರೆ ‌ಮಾಧ್ಯಮಗಳಲ್ಲಿ ಪ್ರಚಾರ ಪಡೆಯೋ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಅಯೋಧ್ಯೆಯ ಶ್ರೀರಾಮಮಂದಿರದ ಪ್ರತಿಷ್ಠಾಪನೆ ನೆರವೇರುವ ಹಿನ್ನೆಲೆ ಇದೇ 22ರಂದು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಮ್ಮ ಮನೆಗಳಲ್ಲಿ 5 ದೀಪಗಳನ್ನು ಉತ್ತರಾಭಿಮುಖವಾಗಿ ಹಚ್ಚುವ ಮೂಲಕ ಪುಣ್ಯ ಕೆಲಸದಲ್ಲಿ ಭಾಗಿಯಾಗಬೇಕು ಎಂದು ವಿನಂತಿಸಿದರು. ಈ ಹಿನ್ನೆಲೆಯಲ್ಲಿ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆಯನ್ನು ಮನೆಮನೆಗೆ ವಿತರಿಸಲಾಗಿದೆ ಎಂದು ವಿವರಿಸಿದರು.

ಪ್ರತಿ ಮನೆಗೂ ಮಂತ್ರಾಕ್ಷತೆ ಕೊಡುತ್ತಿದ್ದು, ಪ್ರತಿ ಮನೆಯವರೂ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಜಿ. ಮಂಜುನಾಥ್, ಮುಖಂಡ ಸಪ್ತಗಿರಿ ಗೌಡ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ :ಬಿಜೆಪಿ ರಾಜ್ಯ ವಕ್ತಾರ, ಮಾಧ್ಯಮದ ಘಟಕ ಪುನಾರಚನೆ ಮಾಡಿದ ಬಿ ವೈ ವಿಜಯೇಂದ್ರ

ABOUT THE AUTHOR

...view details