ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮೊನ್ನೆ ಬೆಳಗಾವಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಅವಕಾಶ ಕೊಡಿಸಿ ಎಂದು ಬೊಬ್ಬೆ ಹಾಕ್ತಾ ಇದ್ದರು. ಈಗ ಭೇಟಿ ಮಾಡಿದ್ದಾರೆ. ಅವರು ಭೇಟಿ ಮಾಡಿ ಹೊರಬರುವುದರೊಳಗೆ ಕಾಂಗ್ರೆಸ್ ನಾಯಕ ವಿ ಎಸ್ ಉಗ್ರಪ್ಪ ಪತ್ರಿಕಾಗೋಷ್ಠಿ ಮಾಡಿ ಟೀಕಿಸಿದ್ದಾರೆ. ಇವರ ಉದ್ದೇಶ ಏನು? ಕೇಂದ್ರದಿಂದ ಅನುದಾನ ತರುವುದೋ ಅಥವಾ ರಾಜಕೀಯ ಮಾಡುವುದು ಮುಖ್ಯವೋ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಬೆಳಗಾವಿ ಅಧಿವೇಶನದ ವೇಳೆ ಸದನದಲ್ಲಿ ಕೊಡಿಸ್ರಿ ಅಪಾಯಿಟ್ಮೆಂಟ್ ಅಂತಿದ್ದರು. ಈಗ ಅನುಮತಿ ಪಡೆದು ರಾಜ್ಯದ ಮನವಿಕೊಟ್ಟು ಬಂದಿದ್ದಾರೆ. ನಾನು ಅದರ ಬಗ್ಗೆ ದೂರಲ್ಲ. ಆದರೆ, ಕಾಂಗ್ರೆಸ್ ವಕ್ತಾರ ಉಗ್ರಪ್ಪ ಅವರು ಮನವಿ ಕೊಟ್ಟು ಬಂದು ಅರ್ಧ ಗಂಟೆ ಆಗಿಲ್ಲ, ಸುದ್ದಿಗೋಷ್ಠಿ ನಡೆಸಿ ದೂರುತ್ತಿದ್ದಾರೆ.
ನಿಮ್ಮ ಉದ್ದೇಶ ಕೇಂದ್ರದಿಂದ ಪರಿಹಾರ ತರಬೇಕು ಅಂತಲೋ, ರಾಜಕಾರಣ ಮಾಡಬೇಕು ಅಂತಲೋ? ಸರ್ಕಾರ ಬಂದು ಆರು ತಿಂಗಳಲ್ಲಿ ಯಾವುದಾದರೂ ಹೊಸ ಯೋಜನೆ ತಂದಿದ್ದಾರಾ? ಯಾವ ಶಾಸಕ ತಮ್ಮ ಕ್ಷೇತ್ರದಲ್ಲಿ ಗೌರವಯುತವಾಗಿ ಓಡಾಡಿದ್ದಾರಾ? ಕ್ಷೇತ್ರದ ಅಭಿವೃದ್ಧಿಗೆ ಒಂದು ಬಿಡಿಗಾಸು ಅನುದಾನ ಕೊಟ್ಟಿಲ್ಲ. ಇವರ ಉದ್ದೇಶವೇ ರಾಜಕಾರಣ ಮಾಡೋದು ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ಮಾಧ್ಯಮದ ಮುಂದೆ ಉತ್ತರ ಕೊಡುತ್ತಿಲ್ಲ, ಸರ್ವಾಧಿಕಾರಿ ಧೋರಣೆ ಅಂತ ಉಗ್ರಪ್ಪ ಆರೋಪ ಮಾಡಿದ್ದಾರೆ. ನಮ್ಮ ದೇಶದ ಪ್ರಧಾನಿ ಹೇಗೆ ನಡೆದುಕೊಳ್ಳಬೇಕು ಅನ್ನೋದು ಉಗ್ರಪ್ಪ ಅವರನ್ನ ಕೇಳಿ ತೀರ್ಮಾನ ಮಾಡಲ್ಲ. ಉಗ್ರಪ್ಪ, ರಾಮಪ್ಪ, ಸೋಮಪ್ಪ ಕೇಳಿ ನಿರ್ಧಾರ ಮಾಡಲ್ಲ ಎಂದು ಟಾಂಗ್ ನೀಡಿದರು.
ಸಂಸದರ ಅಮಾನತಿಗೆ ವಿಪಕ್ಷಗಳ ಟೀಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಐದು ರಾಜ್ಯದ ಫಲಿತಾಂಶದಲ್ಲಿ ಸೋಲು ಅವರಿಗೆ ಆಘಾತ ತಂದಿದೆ. ಪಂಚರಾಜ್ಯಗಳ ಚುನಾವಣೆಯಲ್ಲಿ ಗೆದ್ದು, ಕಾಂಗ್ರೆಸ್ ಅಲೆ ಬೀಸಲಿದೆ ಅಂತ ತಿಳಿದಿದ್ದರು. ಮುಂದೆ ಲೋಕಸಭೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತೆ, ರಾಹುಲ್ ಪ್ರಧಾನಿ ಆಗ್ತಾರೆ ಅಂತ ತಿಳಿದಿದ್ದರು. ಪಂಚ ರಾಜ್ಯಗಳ ಚುನಾವಣೆ ಸೋಲು ಅವರಿಗೆ ಹತಾಶೆ ತರಿಸಿದೆ. ಸಂಸತ್‌ನಲ್ಲಿ ಅಧಿವೇಶನವನ್ನೂ ಸರಿಯಾಗಿ ನಡೆಸಲು ಬಿಡ್ತಿಲ್ಲ. ಆ ಹತಾಶೆಯಿಂದಲೇ ಹೀಗೆಲ್ಲಾ ಮಾತಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹತಾಶ ಭಾವನೆ ಸೃಷ್ಟಿ ಆಗ್ತಿದೆ :ಗೋವಿಂದ ಕಾರಜೋಳ ಸುದ್ದಿಗೋಷ್ಠಿ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಗಲಾಟೆಗೆ ಅಸಮಾಧಾನ ವ್ಯಕ್ತಪಡಿಸಿದ ವಿಜಯೇಂದ್ರ ಅವರು, ರಾಜ್ಯದಲ್ಲಿರೋ ಕಾಂಗ್ರೆಸ್ ಸರ್ಕಾರ ಮತ್ತು ಪಕ್ಷ ಹತಾಶೆಯಾಗಿದೆ. ಕಳೆದ ಆರು ತಿಂಗಳ ಬೆಳವಣಿಗೆ ನೋಡಿದರೆ ಹತಾಶ ಭಾವನೆ ಸೃಷ್ಟಿ ಆಗಿದೆ. ದಿನೇ ದಿನೆ ಸರ್ಕಾರದ ವೈಫಲ್ಯ ಕಂಡು ಬರುತ್ತಿದೆ. ಬೆಳಗಾವಿ ಮಹಿಳೆ ಬೆತ್ತಲೆಗೊಳಿಸಿದ ಘಟನೆ ಬೆನ್ನಲ್ಲೇ ಮಾಲೂರು ಘಟನೆ ನಡೆದಿದೆ. ಕಾರಜೋಳ ಅವರ ಸುದ್ದಿಗೋಷ್ಠಿ ಸಂದರ್ಭದಲ್ಲಿ ಅಲ್ಲಿ ಕೂಡ ನುಗ್ಗಿ ಗಲಾಟೆ ಮಾಡಿದ್ದಾರೆ. ಎಲ್ಲೋ ಒಂದು ಕಡೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಾಳ್ಮೆ ಕಳೆದುಕೊಳ್ತಿದ್ದಾರೆ. ಜನರ ವಿಶ್ವಾಸ ಕಳೆದುಕೊಳ್ತಿರೋ ಅರಿವು ಅವರಿಗೆ ಕಾಣುತ್ತಿದೆ ಎಂದರು.
ಇದನ್ನೂ ಓದಿ :ಬೆಳಗಾವಿ: ಮಹಿಳೆ ಮೇಲಿನ ದುಷ್ಕೃತ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ