ಬೆಂಗಳೂರು : ಲೋಕಸಭಾ ಚುನಾವಣೆಯ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ 20 ಕ್ಷೇತ್ರ ಗೆಲ್ಲುವ ಕನಸು ಕಾಣುತ್ತಿದೆ. ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಮೂಲಕ ಈ ದೇಶದ ಪ್ರಜ್ಞಾವಂತ ಮತದಾರರು, ಕಾಂಗ್ರೆಸ್ ಪಕ್ಷದ ಗ್ಯಾರಂಟಿಯನ್ನು ನಂಬುವುದಿಲ್ಲ. ಅದರ ಬದಲು ಮೋದಿ ಗ್ಯಾರಂಟಿಯನ್ನು ನಂಬುವುದು ರುಜುವಾತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಬೆಳಗಾವಿ ಮಹಿಳೆ ಪ್ರಕರಣ, ಶಾಲಾ ಮಕ್ಕಳಿಂದ ಶೌಚಾಲಯ ಶುಚಿಗೊಳಿಸಿದ ಘಟನೆಯು ಕಾನೂನು ಸುವ್ಯವಸ್ಥೆ ಕುಸಿದುದರ ಸಂಕೇತವಾಗಿದೆ ಎಂದು ವಾಗ್ದಾಳಿ ನಡೆಸಿದ ಅವರು, ರಾಜ್ಯದಲ್ಲಿ ಸಿಎಂ ಇದ್ದಾರಾ?, ಸಚಿವರು ಇದ್ದಾರಾ? ಎಂದು ಪ್ರಶ್ನಿಸುವಂತಾಗಿದೆ ಎಂದರು.
ಹಿಜಾಬ್ ಕುರಿತಾಗಿ ಸಿಎಂ ಅವರಿಂದ ಇಂಥಹ ಹೇಳಿಕೆಯನ್ನು ಯಾರು ನಿರೀಕ್ಷೆ ಮಾಡಿರಲಿಲ್ಲ. ಕನಿಷ್ಠ ಪಕ್ಷ ಶಾಲಾ, ಕಾಲೇಜುಗಳಿಗೆ ಹೋಗುವ ಮಕ್ಕಳನ್ನಾದರೂ ರಾಜಕೀಯದಿಂದ ದೂರ ಇಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಿತ್ತು. ಒಂದೆಡೆ ಹಿಜಾಬ್‍ಗೆ ಅವಕಾಶ ಮಾಡಿಕೊಡುವುದಾಗಿ ಹೇಳುವ ಮುಖ್ಯಮಂತ್ರಿಗಳು, ಮತ್ತೊಂದು ಕಡೆ ಇದೇ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಪರೀಕ್ಷೆಗೆ ಹೋಗುವ ವಿದ್ಯಾರ್ಥಿ, ವಿದ್ಯಾರ್ಥಿನಿಯರ, ತಾಯಂದಿರ ತಾಳಿ, ಕಾಲುಂಗುರ ತೆಗೆದಿಟ್ಟು ಹೋಗಲು ತಿಳಿಸುತ್ತದೆ. ರಾಜ್ಯ ಸರ್ಕಾರದ ಈ ನಡವಳಿಕೆಯನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ ಎಂದರು.
ಕಾಂಗ್ರೆಸ್ಸಿಗರು ಅಲ್ಪಸಂಖ್ಯಾತರ ಕುರಿತು ಮಾತ್ರ ಮಾತನಾಡುತ್ತಾರೆ. ಅವರು ತುಷ್ಟೀಕರಣ ನೀತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದನ್ನು ಉಗ್ರವಾಗಿ ಖಂಡಿಸುವುದಾಗಿ ವಿಜಯೇಂದ್ರ ಹೇಳಿದರು.