ಕರ್ನಾಟಕ

karnataka

ETV Bharat / state

ಕೇಂದ್ರ ಸರ್ಕಾರ ಟೀಕೆ ಮಾಡುವ ಮೂಲಕ ಕೆಟ್ಟ ಸಂಪ್ರದಾಯಕ್ಕೆ ದಾರಿ ಮಾಡಿಕೊಟ್ಟ ಸಿಎಂ​: ಬಿ ವೈ ವಿಜಯೇಂದ್ರ ಟೀಕೆ

ಹಿಂದಿನ ಸರ್ಕಾರ ಆರ್ಥಿಕ ಶಿಸ್ತು ಮೀರಿದೆ ಎಂದು ಮಾಡಿರುವ ಟೀಕೆಯಲ್ಲಿ ಸತ್ಯಾಂಶವಿಲ್ಲ ಎಂದು ಶಾಸಕ ಬಿ ವೈ ವಿಜಯೇಂದ್ರ ಹೇಳಿದ್ದಾರೆ.

b-y-vijayendra-reaction-on-chief-minister-siddaramaiah
ಕೇಂದ್ರ ಸರ್ಕಾರವನ್ನು ಟೀಕೆ ಮಾಡುವ ಮೂಲಕ ಕೆಟ್ಟ ಸಂಪ್ರದಾಯಕ್ಕೆ ದಾರಿ ಮಾಡಿಕೊಟ್ಟ ಸಿಎಂ​: ಬಿ ವೈ ವಿಜಯೇಂದ್ರ ಟೀಕೆ

By

Published : Jul 17, 2023, 5:09 PM IST

Updated : Jul 17, 2023, 6:37 PM IST

ಶಾಸಕ ಬಿ ವೈ ವಿಜಯೇಂದ್ರ

ಬೆಂಗಳೂರು: ಅನುಭವಿ ರಾಜಕಾರಣಿ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‍ ಮಂಡನೆ ಸಂದರ್ಭದಲ್ಲಿ ಕೇಂದ್ರ ಸರ್ಕಾರವನ್ನು ಟೀಕೆ ಮಾಡುವ ಮೂಲಕ ಕೆಟ್ಟ ಸಂಪ್ರದಾಯಕ್ಕೆ ದಾರಿ ಮಾಡಿಕೊಟ್ಟಿದ್ದಾರೆ ಎಂದು ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ವಿಧಾನಸಭೆಯಲ್ಲಿ ಇಂದು ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅನುಭವಿಗಳಾಗಿರುವ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ, ಸದನವನ್ನು ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಲು ಬಳಸಿದ್ದಾರೆ ಎಂದರು.

ಸಿದ್ದರಾಮಯ್ಯ ಬರಿ ಕಾಂಗ್ರೆಸ್‍ ಮುಖ್ಯಮಂತ್ರಿ ಅಲ್ಲ. ಆರು ಕೋಟಿ ಜನರ ಪ್ರತಿನಿಧಿ ಎಂಬುದನ್ನು ಮರೆಯಬಾರದು. ದೇಶದ 135 ಕೋಟಿ ಜನರ ಪ್ರತಿನಿಧಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಗೌರವದಿಂದ ಮಾತನಾಡಬೇಕು ಎಂದ ಅವರು, ಗ್ಯಾರಂಟಿ ಯೋಜನೆಗಳಿಂದ ಸರ್ಕಾರ 80 ಸಾವಿರದಿಂದ ಒಂದು ಲಕ್ಷ ಕೋಟಿ ರೂ. ಸಾಲ ಮಾಡಬೇಕಾದ ಪರಿಸ‍್ಥಿತಿ ಎದುರಾಗುವ ಸಾಧ್ಯತೆಗಳಿವೆ. ಮದ್ಯದ ದರ ಏರಿಕೆ ಮಾಡಿರುವುದರಿಂದ ಗ್ರಾಮೀಣ ಭಾಗದಲ್ಲಿ ಕಳ್ಳಭಟ್ಟಿ ಹೆಚ್ಚಾಗಲಿದೆ. ಹಿಂದಿನ ಸರ್ಕಾರ ಆರ್ಥಿಕ ಶಿಸ್ತು ಮೀರಿದೆ ಎಂದು ಮಾಡಿರುವ ಟೀಕೆಯಲ್ಲಿ ಸತ್ಯಾಂಶವಿಲ್ಲ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ 402 ಕೋಟಿ ರೂ. ಉಳಿತಾಯ ಬಜೆಟ್‍ ಮಂಡಿಸಿದ್ದಾರೆ ಎಂದು ಹೇಳಿದರು.

ಬಜೆಟ್​ಗೆ ಶ್ಲಾಘನೆ: ಆಡಳಿತ ಪಕ್ಷದ ಶಾಸಕಿ ನಯನ ಮೋಟಮ್ಮ ಮಾತನಾಡಿ, ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಿದೆ. ಬಜೆಟ್‍ನಲ್ಲಿ ಈ ಯೋಜನೆಗಳಿಗೆ 17,500 ಕೋಟಿ ರೂ. ಮೀಸಲಿಡುವ ಮೂಲಕ ಮಹಿಳೆಯರ ಪರ ಬಜೆಟ್‍ ಮಂಡಿಸಿರುವುದು ಶ್ಲಾಘನೀಯ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಈ ಯೋಜನೆಗಳು ಸಹಕಾರಿಯಾಗಿವೆ. ಪ್ರತಿಪಕ್ಷಗಳು ಮಾಡುವ ಟೀಕೆ-ಟಿಪ್ಪಣಿಗಳಲ್ಲಿ ಸತ್ಯಾಂಶವಿಲ್ಲ ಎಂದರು.

ಬಿಜೆಪಿ ಶಾಸಕ ಗುರುರಾಜಶೆಟ್ಟಿ ಗಂಟಿಹೊಳಿ ಮಾತನಾಡಿ, ಬಜೆಟ್‍ನಲ್ಲಿ ಅನ್ನಭಾಗ್ಯ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಹಸಿವು ಗೊತ್ತಿದ್ದವರಿಗೆ ಮಾತ್ರ ಅನ್ನದ ಮಹತ್ವ ತಿಳಿದಿರುತ್ತದೆ. ನಾನು ಪ್ರತಿಪಕ್ಷದ ಶಾಸಕರಾದರೂ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆ ಬಡ ಜನರಿಗೆ ಅನುಕೂಲವಾಗಲಿದೆ. ಬಂಡವಾಳ ಹೂಡಿಕೆಗೆ ವಿಶೇಷ ಮಹತ್ವ ನೀಡಿದರೆ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕು. ನೀರಾವರಿ ಸೇರಿದಂತೆ ವಿವಿಧ ವಲಯಗಳಿಗೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿದರು.

ಗುಳೆ ಹೋಗುವುದನ್ನು ನಿಲ್ಲಿಸಿ: ಜೆಡಿಎಸ್‍ ಶಾಸಕ ಶರಣಗೌಡ ಕಂದಕೂರ್ ಮಾತನಾಡಿ, ಕಲ್ಯಾಣ ಕರ್ನಾಟಕಕ್ಕೆ ಬಜೆಟ್‍ನಲ್ಲಿ ಐದು ಸಾವಿರ ಕೋಟಿ ಘೋಷಿಸಿರುವುದಕ್ಕೆ ಧನ್ಯವಾದಗಳು. ಆದರೆ, ಕಲ್ಯಾಣ ಕರ್ನಾಟಕದಿಂದ ಅತಿ ಹೆಚ್ಚು ಜನರು ಗುಳೆ ಹೋಗುತ್ತಿದ್ದಾರೆ. ಇದನ್ನು ತಡೆಯಬೇಕು. ನಮ್ಮ ಕ್ಷೇತ್ರದಲ್ಲಿ ಕಲುಷಿತ ನೀರು ಕುಡಿದು ಮೂವರು ಮೃತಪಟ್ಟರು. ಮೃತರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಆಡಳಿತ ಪಕ್ಷದ ಶಾಸಕ ತಮ್ಮಯ್ಯ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಉದ್ಯೋಗ ಸಮಸ್ಯೆ ಇದ್ದು, ಸರ್ಕಾರ ಪರಿಹರಿಸಲಿದೆ ಎಂದು ಭಾವಿಸಿರುವುದಾಗಿ ಹೇಳಿದರು.

ಆನೆ ಹಾವಳಿ ತಡೆಗಟ್ಟಿ: ಬಿಜೆಪಿ ಶಾಸಕ ಸಿಮೆಂಟ್‍ ಮಂಜು ಮಾತನಾಡಿ, ನಮ್ಮ ಜಿಲ್ಲೆ ಮಲೆನಾಡು, ಅರೆಮಲೆನಾಡು ಮತ್ತು ಬಯಲು ಸೀಮೆ ಪ್ರದೇಶಕ್ಕೆ ಸೇರಿದೆ. ನಮ್ಮ ಜಿಲ್ಲೆಯಲ್ಲಿ ಆನೆ ಹಾವಳಿ ಹೆಚ್ಚಾಗಿದೆ. ಸಕಲೇಶಪುರ ಕ್ಷೇತ್ರದಲ್ಲಿ ಹೆಚ್ಚಿದ್ದು, ಬ್ಯಾರಿಕೇಡ್‍ ನಿರ್ಮಿಸಲು ಮೂರು ಕೋಟಿ ರೂ. ನೀಡಬೇಕು. ಆನೆ ಹಾವಳಿ ತಡೆಗೆ ಹೆಚ್ಚು ಬಜೆಟ್‍ನಲ್ಲಿ ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ:Debate on Budget: ಬಜೆಟ್ ಮೇಲಿನ ಚರ್ಚೆಯಲ್ಲಿ ಆಡಳಿತ, ಪ್ರತಿಪಕ್ಷದ ಶಾಸಕರ ನಡುವೆ ಮಾತಿನ ಚಕಮಕಿ

Last Updated : Jul 17, 2023, 6:37 PM IST

ABOUT THE AUTHOR

...view details