ಕರ್ನಾಟಕ

karnataka

ETV Bharat / state

ಹ್ಯಾಟ್ರಿಕ್ ಗೆಲುವಿನ ಕನಸಿನೊಂದಿಗೆ ಮಸ್ಕಿ ಪ್ರಚಾರ ಕಣಕ್ಕೆ ವಿಜಯೇಂದ್ರ ಎಂಟ್ರಿ: ಗೆದ್ರೆ ವರ್ಚಸ್ಸು, ಸೋತ್ರೆ ಮುಖಭಂಗ - maski by election bjp campaign

ಬಿ.ವೈ. ವಿಜಯೇಂದ್ರ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಆರಂಭಿಸಿ ನಂತರ 2020ರ ಜುಲೈ 31 ರಲ್ಲಿ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಯುವ ಮೋರ್ಚಾದಲ್ಲಿ ಒಂದು, ಉಪಾಧ್ಯಕ್ಷರಾಗಿ ಮತ್ತೊಂದು ಚುನಾವಣೆ ಗೆದ್ದಿರುವ ವಿಜಯೇಂದ್ರ ಇದೀಗ ಮೂರನೇ ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ.

b y vijayendra entered maski for by election campaign
ಹ್ಯಾಟ್ರಿಕ್ ಗೆಲುವಿನ ಕನಸಿನೊಂದಿಗೆ ಮಸ್ಕಿ ಪ್ರಚಾರ ಕಣಕ್ಕೆ ಧುಮುಕಿದ ಸಿಎಂ ಪುತ್ರ ಬಿವೈವಿ

By

Published : Mar 20, 2021, 7:24 PM IST

ಬೆಂಗಳೂರು: ಈವರೆಗೂ ಬಿಜೆಪಿಗೆ ಗೆಲ್ಲಲು ಸಾಧ್ಯವಾಗದೇ ಇದ್ದಂತಹ ಎರಡು ಕ್ಷೇತ್ರಗಳ ಚುನಾವಣೆಯಲ್ಲಿ ತಮ್ಮದೇ ಕಮಾಲ್​ ಮಾಡಿರುವ ಸಿಎಂ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಗೆಲುವಿನ ಅಭಿಯಾನ ಮುಂದುವರೆಸುವ ಉತ್ಸಾಹದಲ್ಲಿ ಮಸ್ಕಿಯಲ್ಲಿ ಬೀಡುಬಿಟ್ಟಿದ್ದಾರೆ. ಕ್ಷೇತ್ರವನ್ನು ಗೆಲ್ಲುವ ಮೂಲಕ ಪಕ್ಷದಲ್ಲಿ ತಮ್ಮ ಅಸ್ತಿತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಲು ಮುಂದಾಗಿದ್ದಾರೆ.

ವರುಣಾ ಕ್ಷೇತ್ರದ ಟಿಕೆಟ್ ಕೈತಪ್ಪಿದ ನಂತರ ಪಕ್ಷದಲ್ಲಿ ಜವಾಬ್ದಾರಿ ನಿರ್ವಹಿಸುತ್ತಿರುವ ಬಿ.ವೈ. ವಿಜಯೇಂದ್ರ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಆರಂಭಿಸಿ ನಂತರ 2020ರ ಜುಲೈ 31 ರಲ್ಲಿ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಯುವ ಮೋರ್ಚಾದಲ್ಲಿ ಒಂದು, ಉಪಾಧ್ಯಕ್ಷರಾಗಿ ಮತ್ತೊಂದು ಚುನಾವಣೆ ಗೆದ್ದಿರುವ ವಿಜಯೇಂದ್ರ ಇದೀಗ ಮೂರನೇ ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ.

ಯುವ ಮೋರ್ಚಾದಲ್ಲಿದ್ದಾಗ 2019 ರ ಡಿಸೆಂಬರ್​ನಲ್ಲಿ ನಡೆದ ಕೆ.ಆರ್. ಪೇಟೆ ಉಪ ಚುನಾವಣಾ ಉಸ್ತುವಾರಿಯಾಗಿದ್ದ ವಿಜಯೇಂದ್ರ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈವರೆಗೂ ಗೆಲ್ಲಲು ಸಾಧ್ಯವಾಗದೇ ಇದ್ದ ಕ್ಷೇತ್ರದಲ್ಲಿ ಕಮಲ ಅರಳಿಸಿದ್ದರು. ವಿಶೇಷವಾಗಿ ಸಿಎಂ ಯಡಿಯೂರಪ್ಪ ಹುಟ್ಟಿದ ಜಿಲ್ಲೆಯ ಕ್ಷೇತ್ರದಲ್ಲಿ ಪಕ್ಷವನ್ನು ಗೆಲ್ಲಿಸಲು ಆಗಲಿಲ್ಲ ಎನ್ನುವ ಕೊರಗನ್ನ ವಿಜಯೇಂದ್ರ ನೀಗಿಸಿದ್ದರು. ಅಪ್ಪನಿಗೆ ತವರು ಕ್ಷೇತ್ರದ ಗೆಲುವಿನ ಉಡುಗೊರೆ ನೀಡಿದ್ದರು.

ತಂದೆಯ ಆಶೀರ್ವಾದದೊಂದಿಗೆ ಮಸ್ಕಿಗೆ

ನಂತರ 2020ರಲ್ಲಿ ನಡೆದ ಶಿರಾ ಕ್ಷೇತ್ರದ ಉಪ ಚುನಾವಣೆಗೂ ವಿಜಯೇಂದ್ರಗೆ ಚುನಾವಣಾ ಉಸ್ತುವಾರಿ ವಹಿಸಲಾಗಿತ್ತು. 2020 ರ ಜುಲೈ 31 ರಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದ ವಿಜಯೇಂದ್ರಗೆ ಶಿರಾ ಕ್ಷೇತ್ರದ ಅಗ್ನಿಪರೀಕ್ಷೆಯನ್ನು ಇರಿಸಲಾಗಿತ್ತು. ತಿಂಗಳುಗಟ್ಟಲೇ ಶಿರಾದಲ್ಲೇ ಬೀಡುಬಿಟ್ಟಿದ್ದ ವಿಜಯೇಂದ್ರ, ತಮ್ಮೇಶ್ ಗೌಡ, ಶಾಸಕ ಪ್ರೀತಂಗೌಡ ಅವರನ್ನೊಳಗೊಂಡ ತಂಡವನ್ನು ಬಳಸಿಕೊಂಡು ಚುನಾವಣಾ ಕಾರ್ಯತಂತ್ರ ರೂಪಿಸಿ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡರನ್ನು ಗೆಲ್ಲಿಸುವ ಮೂಲಕ ಮೊದಲ ಬಾರಿಗೆ ಶಿರಾದಲ್ಲೂ ಕಮಲ ಅರಳಿಸಿ ತಮ್ಮ ಅಸ್ತಿತ್ವ ಮತ್ತು ಸಂಘಟನಾ ಶಕ್ತಿಯನ್ನು ಸಾಬೀತುಪಡಿಸಿದ್ದರು.

ಗೆಲುವಿನ ನಿರೀಕ್ಷೆಯೊಂದಿಗೆ ಮಸ್ಕಿಗೆ:

ಇದೀಗ ಮೂರನೇ ಬಾರಿಗೆ ಮತ್ತೊಂದು ಉಪ ಚುನಾವಣೆಯಲ್ಲಿ ವಿಧಾನಸಭಾ ಕ್ಷೇತ್ರವೊಂದರ ಉಸ್ತುವಾರಿ ಪಡೆದಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯೊಂದಿಗೆ ಮಸ್ಕಿಗೆ ವಿಜಯೇಂದ್ರ ತಂಡ ಪ್ರವೇಶ ಮಾಡಿದೆ. ಚುನಾವಣಾ ರಣತಂತ್ರ, ಪ್ರಚಾರ ತಂತ್ರ, ಮನೆ ಮನೆ ಪ್ರಚಾರ, ಸಮಾವೇಶಗಳನ್ನು ಆಯೋಜಿಸಿ ಬಿಜೆಪಿ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ಕಾರ್ಯ ನಡೆಸಲಿದೆ‌. ಆರಂಭದಲ್ಲಿ ಬಸವಕಲ್ಯಾಣ ಕ್ಷೇತ್ರದ ಉಸ್ತುವಾರಿ ವಹಿಸಿಕೊಳ್ಳುವಂತೆ ಪಕ್ಷ ಸೂಚನೆ ನೀಡಿದ್ದರೂ ನಂತರ ಪ್ರತಾಪ್ ಗೌಡ ಪಾಟೀಲ್ ಒತ್ತಾಯದ ಮೇರೆಗೆ ಮಸ್ಕಿಗೆ ಉಸ್ತುವಾರಿಯನ್ನಾಗಿ ನೇಮಕಗೊಳಿಸಿದ್ದು, ಅಧಿಕೃತವಾಗಿ ಪ್ರಚಾರದ ಕಣಕ್ಕೆ ಪ್ರವೇಶ ಮಾಡಿದ್ದಾರೆ.

ತಂದೆಯ ನೆರಳಿನಲ್ಲಿ ರಾಜಕೀಯ ಲಾಭಕ್ಕೆ ವಿಜಯೇಂದ್ರ ಮುಂದಾಗಿದ್ದಾರೆ ಎನ್ನುವ ಟೀಕೆಗೆ ಕೆ.ಆರ್. ಪೇಟೆ ಮತ್ತು ಶಿರಾ ಚುನಾವಣೆ ಗೆದ್ದು ಉತ್ತರ ನೀಡಿದ್ದ ವಿಜಯೇಂದ್ರ ಇದೀಗ ಪಕ್ಷದಲ್ಲಿ ತಮ್ಮ ಭವಿಷ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು ಮತ್ತು ತಮ್ಮ ಅಸ್ತಿತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಲು ಮಸ್ಕಿ ಕ್ಷೇತ್ರದ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದಾರೆ.

ತಂದೆಯ ಆಶೀರ್ವಾದದೊಂದಿಗೆ ಮಸ್ಕಿಗೆ:

ಪಕ್ಷ ಅಧಿಕೃತವಾಗಿ ಅಭ್ಯರ್ಥಿ ಹೆಸರು ಪ್ರಕಟಿಸುವ ಮುನ್ನವೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಸ್ಕಿ ಚುನಾವಣೆ ಕುರಿತು ಮಾತುಕತೆ ನಡೆಸಿರುವ ವಿಜಯೇಂದ್ರ ಕ್ಷೇತ್ರದಲ್ಲಿ ಕಮಲ ಅರಳಿಸುವ ಆತ್ಮವಿಶ್ವಾಸದೊಂದಿಗೆ ತಂದೆಯ ಆಶೀರ್ವಾದ ಪಡೆದುಕೊಂಡು ಮಸ್ಕಿ ಕಡೆ ತೆರಳಿದ್ದಾರೆ. ಸಂಭಾವ್ಯ ಅಭ್ಯರ್ಥಿ ಪ್ರತಾಪ್ ಗೌಡರ ಪರ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಪ್ರತಾಪ್ ಗೌಡ ಪಾಟೀಲ್ ಗೆಲ್ಲಲಿದ್ದಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೋಲಿಲ್ಲದ‌ ಸರದಾರ:

ಈಗಾಗಲೇ ವಿಜಯೇಂದ್ರ ಜವಾಬ್ದಾರಿ ಪಡೆದ ಕ್ಷೇತ್ರದಲ್ಲಿ ಸೋಲು ಸಂಭವಿಸುವುದಿಲ್ಲ, ವಿಜಯೇಂದ್ರ ಉಸ್ತುವಾರಿಯಲ್ಲಿ ಗೆಲುವು ಲಭಿಸಲಿದೆ ಎನ್ನುವ ಮಾತುಗಳು ಪಕ್ಷದ ಪಡಸಾಲೆಯಲ್ಲಿ ಹರಿದಾಡುತ್ತಿವೆ. ವಿಧಾನಸಭೆ ಕಲಾಪದಲ್ಲಿಯೂ ವಿಜಯೇಂದ್ರ ದಿಗ್ವಿಜಯದ ಬಗ್ಗೆ ಪ್ರತಿಪಕ್ಷಗಳ ಸದಸ್ಯರು ಪ್ರಸ್ತಾಪ ಮಾಡುವ ಮಟ್ಟಿಗೆ ರಾಜಕೀಯದಲ್ಲಿ ಬೆಳೆದು ನಿಂತಿದ್ದಾರೆ. ಅದೇ ಹುಮ್ಮಸ್ಸಿನಲ್ಲಿ ಮಸ್ಕಿಯ ಚುನಾವಣಾ ಪ್ರಚಾರದ ಅಖಾಡಕ್ಕೆ ಧುಮುಕಿದ್ದು, ಕ್ಷೇತ್ರದಲ್ಲಿ ಕಮಲ ಅರಳಿಸಲು ಮುಂದಾಗಿದ್ದಾರೆ.

ಗೆದ್ದರೆ ವರ್ಚಸ್ಸು ವೃದ್ಧಿ:

ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದರೆ ವಿಜಯೇಂದ್ರರ ವರ್ಚಸ್ಸು ಪಕ್ಷದಲ್ಲಿ ಮತ್ತಷ್ಟು ವೃದ್ಧಿಯಾಗಲಿದೆ. ಹ್ಯಾಟ್ರಿಕ್ ಗೆಲುವಿನ ಮೂಲಕ ಬೈ ಎಲೆಕ್ಷನ್ ಸ್ಪೆಷಲಿಸ್ಟ್ ಎಂದು ಕೇಂದ್ರದ ನಾಯಕರಿಂದಲೂ ಶಹಬ್ಬಾಸ್ ಗಿರಿ ಪಡೆಯಲಿದ್ದಾರೆ. ಒಂದು ವೇಳೆ ಅಭ್ಯರ್ಥಿ ಸೋತರೆ ಅದರ ಹೊಣೆ ಹೊರಬೇಕಾಗಲಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದ ಪ್ರತಾಪ್‌ ಗೌಡ ಪಾಟೀಲ್​​ರನ್ನು ಗೆಲ್ಲಿಸಿಕೊಳ್ಳುವ ಹೊಣೆಗಾರಿಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಲಿದ್ದು, ಸೋಲಿನ‌ ಹೊಣೆಯೂ ಅವರದ್ದೇ ಆಗಲಿದೆ. ಅಲ್ಲದೆ ಮತ್ತೆ ಪ್ರತಾಪ್ ಗೌಡ ಪಾಟೀಲ್​ಗೆ ಪರಿಷತ್ ಸ್ಥಾನ ನೀಡುವ ಸನ್ನಿವೇಶವೂ ಎದುರಾಗುವ ಸಾಧ್ಯತೆ ಇದೆ. ಹಾಗಾಗಿ ಸವಾಲಾಗಿ ಚುನಾವಣೆಯನ್ನು ಸ್ವೀಕರಿಸಿರುವ ವಿಜಯೇಂದ್ರ ತಮ್ಮ ತಂಡದೊಂದಿಗೆ ಪ್ರಚಾರದ ಕಣಕ್ಕೆ ದುಮುಕಿದ್ದಾರೆ.

ಅಸಮಧಾನದ ನಡುವೆ ಜವಾಬ್ದಾರಿ:

ಪಕ್ಷದಲ್ಲಿ ವಿಜಯೇಂದ್ರಗೆ ಸಿಗುತ್ತಿರುವ ಸ್ಥಾನ-ಮಾನಗಳಿಗೆ ಆಂತರಿಕವಾಗಿ ಸಾಕಷ್ಟು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗ್ತಿದೆ. ವರುಣಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾಗ ದೊಡ್ಡ ಮಟ್ಟದಲ್ಲೇ ವಿರೋಧ ವ್ಯಕ್ತವಾಗಿತ್ತು. ನಂತರ ಅವರಿಗೆ ಟಿಕೆಟ್ ನಿರಾಕರಿಸಿ ಪಕ್ಷದಲ್ಲಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಲಾಗಿತ್ತು. ಈ ಜವಾಬ್ದಾರಿ ನೀಡಿದ್ದಕ್ಕೂ ಕೆಲ ನಾಯಕರು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೂ ಜವಾಬ್ದಾರಿ ನಿರ್ವಹಿಸಿದ್ದ ವಿಜಯೇಂದ್ರಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಿದಾಗಲೂ ಕೆಲ ನಾಯಕರು ಆಕ್ಷೇಪ ಎತ್ತಿದ್ದರು. ಸಿಎಂ ಪುತ್ರ ಎಂದು ಅವಕಾಶ ನೀಡಲಾಗುತ್ತಿದೆ ಎಂದು ಟೀಕಿಸಿದ್ದರು. ಇದೀಗ ಉಪ ಚುನಾವಣಾ ಉಸ್ತುವಾರಿಯನ್ನಾಗಿ ನೇಮಿಸಿ ಅವರ ಕೆಳಗೆ ಈಶ್ವರಪ್ಪ, ಜಗದೀಶ್ ಶೆಟ್ಟರ್ ರಂತಹ ನಾಯಕರು ಪ್ರಚಾರ ಮಾಡಬೇಕಿರುವುದು ಪಕ್ಷದ ಹಿರಿಯ ನಾಯಕರಿಗೂ ಇರುಸು-ಮುರುಸಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಎಲ್ಲಾ ಟೀಕೆಗಳ ನಡುವೆಯೂ ಅಸ್ತಿತ್ವ ಉಳಿಸಿಕೊಳ್ಳುವ ಸಂದಿಗ್ಧ ಸ್ಥಿತಿಯನ್ನು ವಿಜಯೇಂದ್ರ ಎದುರಿಸಬೇಕಿದೆ.

ಇದನ್ನೂ ಓದಿ:ಬೈ ಎಲೆಕ್ಷನ್: ತಂದೆಯ ಆಶೀರ್ವಾದ ಪಡೆದು ಮಸ್ಕಿಯತ್ತ ಹೊರಟ ಸಿಎಂ ಪುತ್ರ

ಒಟ್ಟಿನಲ್ಲಿ ಹ್ಯಾಟ್ರಿಕ್ ಗೆಲುವಿನ ಕನಸಿನೊಂದಿಗೆ ಮಸ್ಕಿ ಚುನಾವಣಾ ಪ್ರಚಾರ ಕಣಕ್ಕೆ ವಿಜಯೇಂದ್ರ ಧುಮುಕಿದ್ದು, ಅವರಿಗೆ ಮೂರನೇ ಗೆಲುವು ಸಿಗಲಿದೆಯಾ? ಇಲ್ಲ, ಮುಖಭಂಗವಾಗಲಿದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details