ಬೆಂಗಳೂರು :ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡುತ್ತಿದ್ದಂತೆ ಸಂಘಟನಾತ್ಮಕ ಚಟುವಟಿಕೆಯನ್ನು ಅಧಿಕೃತವಾಗಿ ಆರಂಭಿಸಿರುವ ಬಿ ವೈ ವಿಜಯೇಂದ್ರ, ಮೊದಲನೆ ಸಭೆಯನ್ನಾಗಿ ಶುಕ್ರವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಪಕ್ಷದ ಎಲ್ಲಾ ಶಾಸಕರು ಮತ್ತು ಪರಿಷತ್ ಸದಸ್ಯರಿಗೆ ಆಹ್ವಾನ ನೀಡಿದ್ದಾರೆ.
ಇಂದು ಬೆಳಗ್ಗೆಯಷ್ಟೇ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಬಿ. ವೈ ವಿಜಯೇಂದ್ರ ಅವರು ಪ್ರತಿಪಕ್ಷ ನಾಯಕರ ಆಯ್ಕೆ ಪ್ರಕ್ರಿಯೆ ನಡೆಸಲು ಹಾಗೂ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ನವೆಂಬರ್ 17ರ ಶುಕ್ರವಾರ ಸಂಜೆ 6 ಗಂಟೆಗೆ ನಗರದ ಐಟಿಸಿ ಗಾರ್ಡೇನಿಯಾ ಹೋಟೆಲ್ನಲ್ಲಿ ಶಾಸಕಾಂಗ ಪಕ್ಷದ ಸಭೆ ನಿಗದಿಪಡಿಸಿದ್ದು, ಪಕ್ಷದ ಎಲ್ಲ ಶಾಸಕರು ಮತ್ತು ಪರಿಷತ್ ಸದಸ್ಯರು ತಪ್ಪದೇ ಭಾಗವಹಿಸಬೇಕೆಂದು ಸೂಚಿಸಿದ್ದಾರೆ.
ಡಿಸೆಂಬರ್ 4 ರಂದು ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದ್ದು, ಅದಕ್ಕೂ ಮೊದಲೇ ಉಭಯ ಸದನಗಳಲ್ಲಿ ಪ್ರತಿಪಕ್ಷ ನಾಯಕರ ಆಯ್ಕೆ ಮಾಡಬೇಕಿದೆ. ಅದಕ್ಕಾಗಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಚೊಚ್ಚಲ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ಪ್ರತಿಪಕ್ಷ ನಾಯಕರ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.
ಇನ್ನು ಶುಕ್ರವಾರ ಸಂಜೆ ದೆಹಲಿಯಿಂದ ಹೈಕಮಾಂಡ್ ಪ್ರತಿನಿಧಿಗಳಾಗಿ ಇಬ್ಬರು ನಾಯಕರು ವೀಕ್ಷಕರಾಗಿ ಆಗಮಿಸಲಿದ್ದಾರೆ. ಯಾವ ನಾಯಕರನ್ನು ಕಳುಹಿಸಲಿದ್ದಾರೆ ಎನ್ನುವ ಮಾಹಿತಿ ಇನ್ನು ರಾಜ್ಯ ಘಟಕಕ್ಕೆ ಬಂದಿಲ್ಲ. ಬಹುತೇಕ ರಾಜ್ಯ ರಾಜಕಾರಣದ ಬಗ್ಗೆ ಹೆಚ್ಚಿನ ಮಾಹಿತಿ ಇರುವ ನಾಯಕರನ್ನೇ ಕಳುಹಿಸಿಕೊಡುವ ಸಾಧ್ಯತೆ ಇದೆ ಎಂಬುದಾಗಿ ತಿಳಿದು ಬಂದಿದೆ.