ಬೆಂಗಳೂರು: ದೇಶದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದೆ. ಆದರೆ, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ನವರು 'ಶಿವಕುಮಾರ್ ಬ್ಯಾಂಕ್ ಆಫ್ ಇಂಡಿಯಾ' ಎಂಬ ಬ್ರಾಂಚ್ ಒಪನ್ ಮಾಡಿದ್ದಾರೆ. ರಾಜ್ಯದಲ್ಲಿ ಹಣ ವಸೂಲಿ ಮಾಡಿ ಬೇರೆ ಬೇರೆ ರಾಜ್ಯಗಳಿಗೆ ಕಳುಹಿಸುತ್ತಿದ್ದಾರೆ. ಪಂಚ ರಾಜ್ಯ ಮತ್ತು ಲೋಕಸಭೆ ಚುನಾವಣೆಗೆ ಈ ರೀತಿ ಹಣ ಸಂಗ್ರಹಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚ ರಾಜ್ಯ ಚುಬಾವಣೆ ಹತ್ತಿರ ಬರುತ್ತಿದ್ದ ಹಾಗೆ ಕಾಂಗ್ರೆಸ್ ಚಟುವಟಿಕೆ ಚುರುಕಾಗಿದೆ. ಪಂಚ ರಾಜ್ಯಗಳಿಗೆ ಹಣ ಕಳುಹಿಸುವ ಕಾಂಗ್ರೆಸ್ ಸಂಚು ಬಯಲಾಗಿದೆ. ಎಷ್ಟು ಸಾವಿರ ಕೋಟಿ ಕಳುಹಿಸುತ್ತಿದ್ದಾರೆ ಹೊರ ರಾಜ್ಯಗಳಿಗೆ ಅಂತ ಯಾರಿಗೂ ಅಂದಾಜು ಸಿಗುತ್ತಿಲ್ಲ. ಒಳ್ಳೆ ಆಡಳಿತ ಕೊಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್, ಈಗ ಹಗಲು ದರೋಡೆಯಲ್ಲಿ ಮುಳುಗಿದೆ ಎಂದು ಅವರು ಆರೋಪಿಸಿದರು.
ದಸರಾದಲ್ಲಿ ಕಲಾವಿದರಿಂದಲೂ ಕಮಿಷನ್ ಕೇಳುವ ಮಟ್ಟಕ್ಕೆ ಇವರು ಇಳಿದಿದ್ದಾರೆ. ಕಮಿಷನ್ ತಳಮಟ್ಟದ ಅಧಿಕಾರಿಗಳವರೆಗೂ ಮುಟ್ಟಿದೆ ಇದು ಎಟಿಎಂ ಸರ್ಕಾರ, ಕಾಂಗ್ರೆಸ್ ನವರು ಲೂಟಿಗೆ ಮೇನ್ ಬ್ಯಾಂಕ್ ತೆರೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಹಣ ಸಂಗ್ರಹ ಮಾಡಿ ಪಂಚ ರಾಜ್ಯಗಳಿಗೆ ಕಳುಹಿಸುತ್ತಿರುವ ಕಾಂಗ್ರೆಸ್ನ ಸಂಚು ಜನರಿಗೂ ಗೊತ್ತಾಗಿದೆ. ಕಾಂಗ್ರೆಸ್ ನವರು ಐಟಿ ದಾಳಿ ರಾಜಕೀಯ ಪ್ರೇರಿತ ಅಂತ ಅಷ್ಟೇ ಹೇಳುತ್ತಿದ್ದಾರೆ ಆದರೆ, ಆ ಹಣ ಕಾಂಗ್ರೆಸ್ನದ್ದಲ್ಲ ಅಂತ ಅವರು ಹೇಳಿಲ್ಲ. ಅದರ ಅರ್ಥ ಈ ಹಣ ಕಾಂಗ್ರೆಸ್ಗೆ ಸೇರಿದೆ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಇದು ಲೂಟಿ ಸರ್ಕಾರ ಎಂದು ವಿಜಯೇಂದ್ರ ಗಂಭೀರ ಆರೋಪ ಮಾಡಿದರು.
ಅನ್ಯ ರಾಜ್ಯಗಳಿಗೆ ಹಣ ಸಾಗಣೆ ಬಿವೈವಿ ಆರೋಪ: ಡಿಸಿಎಂ ಶಿವಕುಮಾರ್ ಮೂಲಕ ಬಿಬಿಎಂಪಿ, ಬೇರೆ ಬೇರೆ ಇಲಾಖೆಗಳಿಂದ ಹಣ ಸಂಗ್ರಹ ಮಾಡಿ ಅನ್ಯ ರಾಜ್ಯಗಳಿಗೆ ಕಳಿಸುತ್ತಿದ್ದಾರೆ. ಚುನಾವಣೆಗಾಗಿ ಗುತ್ತಿಗೆದಾರರಿಂದ ಹಣ ಸಂಗ್ರಹ ಮಾಡಲಾಗುತ್ತಿದೆ. ರಾಜ್ಯದಲ್ಲಿ ಲೂಟಿ ಮಾಡುವ ಮೂಲಕ ಬೇರೆ ರಾಜ್ಯಗಳಲ್ಲಿ ಚುನಾವಣೆ ಗೆಲ್ಲೋದಕ್ಕೆ ಹೊರಟಿದ್ದಾರೆ. ಇದಕ್ಕೆ ನಾವು ಅವಕಾಶ ಕೊಡಲ್ಲ ಎಂದರು.