ಬೆಂಗಳೂರು: ಎಸ್ಟಿ ಸಮುದಾಯಕ್ಕಾಗಿ ಕೆಲಸ ಮಾಡಿದವರು ಸೋತಿದ್ದಾರೆ ಏನು ಮಾಡದವರು ಶಾಸಕರಾಗಿದ್ದಾರೆ. ಅಂಬೇಡ್ಕರ್ ಮುಗಿಸಿದಂತೆ ನಮ್ಮನ್ನೆಲ್ಲಾ ನಮ್ಮವರೇ ಮುಗಿಸಿದರು, ಒಮ್ಮೊಮ್ಮೆ ರಾಜಕೀಯ ಬಿಟ್ಟು ಬಿಡೋಣ ಅನಿಸುತ್ತದೆ ಎಂದು ಸೋಲಿನ ಕುರಿತು ಮಾಜಿ ಸಚಿವ ಬಿ.ಶ್ರೀರಾಮುಲು ಅತೀವ ಬೇಸರ ಹೊರಹಾಕಿದ್ದಾರೆ.
ಸಿಟಿಜೆನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ವತಿಯಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದ ಎಸ್ಸಿ ಎಸ್ಟಿ ಮೀಸಲು ಹಣ ಮುಳುಗಿಸುತ್ತಿರುವ ರಾಜ್ಯ ಸರ್ಕಾರ ಹೆಸರಿನ ವಿಚಾರ ಸಂಕಿರ್ಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಸರಕಾರ ಎಸ್ಸಿ- ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿತ್ತು. ಆದರೆ, ಇಲ್ಲಿ ವೇದಿಕೆ ಮೇಲೆ ಕುಳಿತ ನಾವೆಲ್ಲ ಸೋತಿದ್ದೇವೆ. ಏನು ಮಾಡದವರು ಅಧಿಕಾರಕ್ಕೆ ಬಂದರು. ಶ್ರೀರಾಮುಲು, ಗೋವಿಂದ ಕಾರಜೋಳ ಎಲ್ಲರನ್ನೂ ಸೋಲಿಸಿದರು. ಅಂಬೇಡ್ಕರ್ ಅವರನ್ನು ಮುಗಿಸಿದಂತೆ ನಮ್ಮನ್ನೆಲ್ಲ ನಮ್ಮವರೇ ಮುಗಿಸಿದರು. ಹೋದಲ್ಲಿ ಬಂದಲ್ಲಿ ನಮ್ಮವರೇ ಜನ ಉಗಿತಾರೆ. ಕಣ್ಣೀರು ಹಾಕಬೇಕಿದೆ ಅಷ್ಟೇ ಎಂದು ಸೋಲಿನ ಕುರಿತು ಅತೃಪ್ತಿ ಹೊರಹಾಕಿದರು.
ಸೋತವರು ನಾವು ತಲೆ ಬಾಗುತ್ತೇವೆ. ಎಸ್ ಟಿ ಸಮುದಾಯವರೆಲ್ಲಾ ನಮ್ಮ ಪಾರ್ಟಿಯಲ್ಲಿ ಸೋತರು, ಎಲ್ಲ ಮಾಡಿ ನಾವು ಸೋತೆವು, ಹಾಗಾದರೆ ನಾವು ಏನು ಮಾಡಲೇ ಬಾರದಿತ್ತಾ? ಇದನ್ನೆಲ್ಲಾ ನೋಡಿದರೆ ರಾಜಕೀಯ ಬಿಟ್ಟು ಬಿಡೋಣ ಅನಿಸುತ್ತದೆ. ಒಳ ಮೀಸಲಾತಿ ಮಾಡಿದೆವು. ಇನ್ನೂ ಏನು ಮಾಡೋಕೆ ಆಗತ್ತದೆ? ಇಲ್ಲಿ ಗೆದ್ದವರಿಗೆ ಬೆಲೆ, ಸೋತವರಿಗೆ ಬೆಲೆ ಇಲ್ಲ. ನಮ್ಮ ಎಸ್ ಟಿ ಸಮುದಾಯಕ್ಕೆ ಒಂದು ರೀತಿಯ ಶಾಪ, ಇಲ್ಲಿ ಕೆಲಸ ಮಾಡಿದವರು ಸೋತಿದ್ದಾರೆ ಏನು ಮಾಡದವರು ಶಾಸಕ ಆಗಿದ್ದಾರೆ ಎಂದು ಸೋಲಿನ ಬಗ್ಗೆ ಶ್ರೀರಾಮಲು ಭಾವನಾತ್ಮಕವಾಗಿ ಮಾತನಾಡಿದರು.