ಬೆಂಗಳೂರು: ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡ ದಿನದಂದೇ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿದ್ದರೆಂಬ ಮಾಹಿತಿ ಕೊಂಚ ತಡವಾಗಿ ಬೆಳಕಿಗೆ ಬಂದಿದೆ.
ಮಂಗಳವಾರ ಸಂಜೆ ಬೆಂಗಳೂರಿನಲ್ಲಿ ವಿನಯ್ ಗುರೂಜಿ ಅವರನ್ನು ಭೇಟಿ ಮಾಡಿದ್ದ ಸಚಿವ ಶ್ರೀರಾಮುಲು, ಆಶ್ರಮದಲ್ಲಿನ ಶಿವಲಿಂಗಕ್ಕೆ ವಿಶೇಷ ಪೂಜೆ, ಅಭಿಷೇಕ ಸಲ್ಲಿಸಿದರು. ನಂತರ ಪ್ರತ್ಯೇಕವಾಗಿ ಕುಳಿತು ಅರ್ಧ ಗಂಟೆ ಕಾಲ ಮಾತುಕತೆ ನಡೆಸಿದ್ದಾರೆ.
ವಿನಯ್ ಗುರೂಜಿ ಆಶ್ರಮದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಶ್ರೀರಾಮುಲು ಡಿಸಿಎಂ ಸ್ಥಾನದ ಯೋಗವಿದೆಯಾ ಎನ್ನುವ ಕುರಿತು ಭವಿಷ್ಯ ಕೇಳಿ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆರೋಗ್ಯ ಖಾತೆ ಕೈ ತಪ್ಪಿದ ಬಗ್ಗೆಯೂ ಅಸಮಾಧಾನಗೊಂಡಿರುವ ಶ್ರೀರಾಮುಲು ರಾಜಕೀಯ ಏಳ್ಗೆಗೆ ಇರುವ ಅಡ್ಡಿ ಆತಂಕಗಳ ಬಗ್ಗೆಯೂ ಸಮಾಲೋಚನೆ ನಡೆಸಿದರು ಎನ್ನಲಾಗಿದೆ. ಉಪ ಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿರುವ ಬಿ. ಶ್ರೀರಾಮುಲು ಇದೀಗ ಸಂಪುಟ ವಿಸ್ತರಣೆ, ಪುನರ್ರಚನೆ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಹೈಕಮಾಂಡ್ ಜೊತೆ ಮಾತುಕತೆ ನಡೆಸುವ ಹೇಳಿಕೆ ನೀಡುತ್ತಿದ್ದಂತೆ ಶ್ರೀರಾಮುಲು ವಿನಯ್ ಗುರೂಜಿ ಭೇಟಿ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಪ್ರಮುಖ ರಾಜಕೀಯ ನಾಯಕರು ಕೂಡ ವಿನಯ್ ಗುರೂಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು. ಇದೀಗ ಶ್ರೀರಾಮುಲು ಅವರ ಸರದಿಯಾಗಿದೆ.