ಕರ್ನಾಟಕ

karnataka

ETV Bharat / state

ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನಿರೀಕ್ಷಿಸಿರಲಿಲ್ಲ, ಅವಕಾಶ ಕೇಳಿಯೂ ಇರಲಿಲ್ಲ: ಯಡಿಯೂರಪ್ಪ - ರಾಜ್ಯಾಧ್ಯಕ್ಷ ಸ್ಥಾನ

Yediyurappa statement about Vijayendra: ವಿಜಯೇಂದ್ರನನ್ನು ಅಧ್ಯಕ್ಷನನ್ನಾಗಿ ಮಾಡಿ ಎಂದು ನಾನು ಯಾರನ್ನೂ ಕೇಳಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.

Former CM B S Yediyurappa
ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ

By ETV Bharat Karnataka Team

Published : Nov 11, 2023, 12:50 PM IST

Updated : Nov 11, 2023, 1:14 PM IST

ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ

ಬೆಂಗಳೂರು: ಬಿ ವೈ ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಸಿಗುತ್ತೆ ಅಂತ ನಾವ್ಯಾರು ನಿರೀಕ್ಷೆ ಇಟ್ಟಿರಲಿಲ್ಲ. ದೆಹಲಿಗೆ ಹೋಗಿ ನನ್ನ ಮಗನಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿ ಅಂತಾನೂ ಕೇಳಿರಲಿಲ್ಲ. ದೊಡ್ಡ ಸ್ಥಾನ ಸಿಕ್ಕಿದಾಗ ಸವಾಲುಗಳು ಸಹಜ, ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಗುರಿ ಮುಟ್ಟಲು ಕಷ್ಟವಿಲ್ಲ. ಆದರೆ ಹಾದಿ ಕಠಿಣ ಇದೆ. ನಾನೂ ಕೂಡ ರಾಜ್ಯ ಪ್ರವಾಸ ಮಾಡಿ ಹೆಚ್ಚಿನ ಸ್ಥಾನ ಗೆಲ್ಲಲು ಶ್ರಮಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಡಾಲರ್ಸ್ ಕಾಲೊನಿಯಲ್ಲಿರುವ ಧವಳಗಿರಿ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋದಿ, ಅಮಿತ್ ಶಾ, ನಡ್ಡಾ ಅವರು ಸೂಕ್ತ ಸಮಯಕ್ಕೆ ಒಳ್ಳೆಯ ನಿರ್ಧಾರ ಮಾಡಿದ್ದಾರೆ. ರಾಜ್ಯ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವುದು ನಮ್ಮ ಗುರಿ. ಈ ಬಾರಿ ರಾಜ್ಯದಲ್ಲಿ 25ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು. ಈ ನಿಟ್ಟಿನಲ್ಲಿ ನಾನು ಕೂಡ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ ಎಂದರು.

ಮೋದಿ ಅವರಂತಹ ಮಹಾನ್ ವ್ಯಕ್ತಿ ದೇಶದ ಪ್ರಧಾನಿಯಾಗಿದ್ದಾರೆ. ದೆಹಲಿಯಲ್ಲಿ ಕುಳಿತು ವಿಜಯೇಂದ್ರನನ್ನು ಅಧ್ಯಕ್ಷನನ್ನಾಗಿ ಮಾಡಿ ಅಂತ ಯಾರನ್ನೂ ಕೇಳಿಲ್ಲ. ಬೇಕಾದರೆ ನೀವುಗಳು ವಿಚಾರಿಸಿ. ನಾವು ಪ್ರವಾಸ ಮಾಡಿದ ಮೇಲೆ ಜನರ ರೆಸ್ಪಾನ್ಸ್ ಹೇಗಿದೆ ಅಂತ ನೋಡಿದ ಮೇಲೆ ನಮ್ಮ ಬಲ ಗೊತ್ತಾಗಲಿದೆ. 25 ಕ್ಷೇತ್ರ ಗೆಲ್ಲೋದು ಸುಲಭವಲ್ಲ. ರಾಜ್ಯಾದ್ಯಂತ ಓಡಾಡಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಎಲ್ಲರೂ ಒಟ್ಟಾಗಿ ಹೋದಲ್ಲಿ ಯಶಸ್ಸು ಖಚಿತ ಎಂದು ಬಿಎಸ್​ವೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಂತರ ಮಾತನಾಡಿದ ಮಾಜಿ ಸಚಿವ ಮುನಿರತ್ನ, ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರು ಈಗ ಅಧಿಕಾರದಲ್ಲಿ ಇಲ್ಲ. ಹೀಗಾಗಿ ಇದು ವಂಶವಾದ ಆಗೋದಿಲ್ಲ ಎಂದು ವಂಶವಾದ ರಾಜಕೀಯಕ್ಕೆ ಹೊಸ ವ್ಯಾಖ್ಯಾನ ಮಾಡಿದ್ದಾರೆ. ಬಿ ವೈ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷನನ್ನಾಗಿ ಆಯ್ಕೆ ಮಾಡುವ ಮೂಲಕ ಯುವಕರಿಗೆ ಅವಕಾಶ ನೀಡಿದಂತಾಗಿದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು, ಆಗ ಯಶಸ್ಸು ಸಿಗಲಿದೆ. ಸದ್ಯ ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ:ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಮೊದಲ ದಿನವೇ ಕಾರ್ಯಕರ್ತರ ಮನೆಗೆ ಬಿ ವೈ ವಿಜಯೇಂದ್ರ ಭೇಟಿ

Last Updated : Nov 11, 2023, 1:14 PM IST

ABOUT THE AUTHOR

...view details