ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪನವರು ದೆಹಲಿಯಲ್ಲಿಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕಾತಿ, ವಿಧಾನಸಭೆ ಚುನಾವಣೆಗೆ ಪಕ್ಷದ ಸಿದ್ಧತೆ ಸೇರಿದಂತೆ ಹಲವಾರು ಸಂಗತಿಗಳ ಬಗ್ಗೆ ಉಭಯ ಮುಖಂಡರು ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.
ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಿಂದ ನೆನೆಗುದಿಗೆ ಬಿದ್ದಿರುವ ಮಂತ್ರಿಮಂಡಲ ವಿಸ್ತರಣೆಯ ಸಾಧಕ-ಬಾಧಕಗಳ ಬಗ್ಗೆ ಹೆಚ್ಚು ಚರ್ಚೆ ನಡೆಯಿತೆಂದು ತಿಳಿದುಬಂದಿದೆ. ಈ ಬಗ್ಗೆ ಪಕ್ಷದ ಹೈಕಮಾಂಡ್ ಗಮನಕ್ಕೆ ತಂದು ಸೂಕ್ತ ತೀರ್ಮಾನ ತೆಗೆದುಕೊಳ್ಳುವ ಕುರಿತು ಇಬ್ಬರೂ ನಾಯಕರುಗಳು ಮಾತುಕತೆ ನಡೆಸಿದ್ದಾರೆಂದು ಹೇಳಲಾಗಿದೆ.
ಕರ್ನಾಟಕದಲ್ಲಿ ಅಡಿಕೆ ಸಂಶೋಧನಾ ಸಂಸ್ಥೆ:ರಾಜ್ಯದಲ್ಲಿ ಅಡಿಕೆ ಸಂಶೋಧನಾ ಸಂಸ್ಥೆ ಸ್ಥಾಪಿಸುವ ಬಗ್ಗೆಯೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ಯಡಿಯೂರಪ್ಪನವರು ಸುದೀರ್ಘ ಚರ್ಚೆ ನಡೆಸಿದರು. ಈ ನಿಟ್ಟಿನಲ್ಲಿ ಕೇಂದ್ರ ಕೃಷಿ ಸಚಿವರ ಜೊತೆ ಚರ್ಚಿಸಿ, ಅಡಿಕೆ ಸಂಶೋಧನಾ ಕೇಂದ್ರ ಸ್ಥಾಪನೆಗೆ ಸಹಕರಿಸಬೇಕೆಂದು ಯಡಿಯೂರಪ್ಪ ಸೇರಿದಂತೆ ಶಿವಮೊಗ್ಗದ ಬಿಜೆಪಿ ನಾಯಕರು ಜೋಶಿಯವರಿಗೆ ಮನವರಿಕೆ ಮಾಡಿದ್ದಾರೆ.
ಎಲೆ ಚುಕ್ಕೆ ರೋಗದಿಂದ ಅಡಿಕೆ ಬೆಳೆಗಾರರು ತೀವ್ರ ನಷ್ಟ ಅನುಭವಿಸುತ್ತಿದ್ದು, ರೈತರಿಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಪರಿಹಾರ ಕೊಡಿಸುವಂತೆ ಮಲೆನಾಡು ಭಾಗದ ಜನಪ್ರತಿನಿಧಿಗಳು, ಪ್ರಲ್ಹಾದ ಜೋಶಿ ಹಾಗೂ ಕೇಂದ್ರ ಕೃಷಿ ಸಚಿವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಕಲಬುರಗಿಯಲ್ಲಿ ಜನ ಸಂಕಲ್ಪ ಸಮಾವೇಶ: ಮಳೆ ನಡುವೆ ಕಾಂಗ್ರೆಸ್ ವಿರುದ್ಧ ಸಿಎಂ ಗುಡುಗು