ಬೆಂಗಳೂರು : ಹಾವೇರಿ ಟಿಕೆಟ್ ಕೈತಪ್ಪಿದ ಕಾರಣಕ್ಕೆ ಮುನಿಸಿಕೊಂಡಿರುವ ಶಾಸಕ ನೆಹರೂ ಓಲೇಕಾರ್ ಅವರ ಮನವೊಲಿಕೆ ಕಾರ್ಯಕ್ಕೆ ರಾಜ್ಯ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪನವರು ಓಲೇಕಾರ್ ಅವರನ್ನು ನಿವಾಸಕ್ಕೆ ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ.
ಬಿಎಸ್‌ವೈ ಸೂಚನೆಯಂತೆ ಕುಮಾರ ಪಾರ್ಕ್ನಲ್ಲಿರುವ ಅಧಿಕೃತ ನಿವಾಸ ಕಾವೇರಿಗೆ ಶಾಸಕ ನೆಹರೂ ಓಲೇಕಾರ್ ಆಗಮಿಸಿದರು. ಯಡಿಯೂರಪ್ಪರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಓಲೇಕಾರ್, "ಆರೋಪ ಬಂದಿದೆ, ಕೋರ್ಟ್ನಲ್ಲಿ ಕೇಸ್ ಇದೆ. ನನ್ನ ವಿರುದ್ಧ ಶಿಕ್ಷೆ ಪ್ರಶ್ನಿಸಿ ನ್ಯಾಯಾಂಗದಲ್ಲಿ ಹೋರಾಟ ನಡೆಸುತ್ತಿದ್ದೇನೆ. ನಾನು ಈಗಾಗಲೇ ಕಷ್ಟದಲ್ಲಿದ್ದೇನೆ, ಅದರಲ್ಲಿಯೂ ಟಿಕೆಟ್ ನೀಡದೆ ಮತ್ತಷ್ಟು ಕಷ್ಟಕ್ಕೆ ನೂಕಿದರೆ ಹೇಗೆ? ಇಷ್ಟು ವರ್ಷ ಪಕ್ಷದಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಈಗ ಏಕಾಏಕಿ ಟಿಕೆಟ್ ನೀಡದೆ ಕಡೆಗಣಿಸಿದರೆ ಹೇಗೆ?" ಎಂದು ನೇರವಾಗಿಯೇ ತಮ್ಮ ಬೇಸರ, ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೆಹರೂ ಓಲೇಕಾರ್ ಅಸಮಾಧಾನದ ನುಡಿಗಳನ್ನು ಆಲಿಸಿದ ಯಡಿಯೂರಪ್ಪ,"ಆತುರದ ನಿರ್ಧಾರ ಬೇಡ, ದುಡುಕಿನ ನಿರ್ಧಾರದಿಂದ ರಾಜಕೀಯ ಭವಿಷ್ಯಕ್ಕೆ ಹಿನ್ನಡೆಯಾಗಲಿದೆ, ಪಕ್ಷ ಬೇರೆ ಜವಾಬ್ದಾರಿ ನೀಡಲಿದೆ. ಬೇರೆ ರೀತಿಯ ಅವಕಾಶಗಳನ್ನೂ ನೀಡಲಿದೆ ಸ್ವಲ್ಪ ಸಮಯ ಕಾಯಬೇಕು" ಎಂದು ಸಲಹೆ ನೀಡಿದರು. "ಪಕ್ಷದ ಹೈಕಮಾಂಡ್ ಗಮನಕ್ಕೆ ಎಲ್ಲ ವಿಷಯವನ್ನೂ ತರಲಾಗುತ್ತದೆ. ಸದ್ಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಹಕರಿಸಿ, ಪಕ್ಷದ ಪರ ಕೆಲಸ ಮಾಡಿ" ಎಂದು ಸಲಹೆ ನೀಡಿದರು.