ಬೆಂಗಳೂರು: ಹಾನಗಲ್ ಉಪಚುನಾವಣೆಯಲ್ಲಿನ ಹಿನ್ನಡೆಗೆ ಯಾರೋ ಒಬ್ಬ ವ್ಯಕ್ತಿಯನ್ನು ಹೊಣೆ ಮಾಡುವುದಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ್ದೇವೆ. ಹೀಗಾಗಿ, ಎಲ್ಲರೂ ಸಮಾನವಾಗಿಯೇ ಸೋಲಿನ ಜವಾಬ್ದಾರಿ ಹಂಚಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಚಿತ್ರದುರ್ಗ ಪ್ರವಾಸಕ್ಕೂ ಮುನ್ನ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಂದಗಿಯಲ್ಲಿ ನಮ್ಮ ನಿರೀಕ್ಷೆ ಮೀರಿ 30 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ನಮ್ಮ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಅದಕ್ಕಾಗಿ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬಹಳ ದೊಡ್ಡ ಅಂತರದಲ್ಲಿ ರಮೇಶ್ ಭೂಸನೂರಗೆ ಗೆಲುವಾಗಿ ಎಂದರು.
ಆದರೆ, ಹಾನಗಲ್ನಲ್ಲಿ ಶಿವರಾಜ್ ಸಜ್ಜನ್ 7 ಸಾವಿರ ಮತಗಳ ಹಿನ್ನಡೆ ಅನುಭವಿಸಿದ್ದಾರೆ. ಅಲ್ಲಿ ನಾವು ಹಿನ್ನಡೆ ನಿರೀಕ್ಷೆ ಮಾಡಿರಲಿಲ್ಲ. ಆದರೂ, ಯಾಕೆ ಈ ರೀತಿ ಹಿನ್ನಡೆಯಾಗಿದೆ ಎನ್ನುವುದನ್ನು ಪಕ್ಷದ ಪ್ರಮುಖರು ಕುರಿತು ಚರ್ಚೆ ಮಾಡುತ್ತೇವೆ. ಎಲ್ಲಿ ಕೊರತೆಯಾಗಿದೆಯೋ, ಅಲ್ಲಿ ಸರಿಪಡಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
'ಸಿದ್ದರಾಮಯ್ಯ ಹಿಗ್ಗುವ ಅಗತ್ಯವಿಲ್ಲ'
ಹಾನಗಲ್ ಗೆಲುವಿನಿಂದ ಕಾಂಗ್ರೆಸ್ನವರು ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಹಿಗ್ಗುವ ಅಗತ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ 140ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಇದರಲ್ಲಿ ಯಾವುದೇ ಅನುಮಾನ ಬೇಡ. ಯಾವುದೋ ಕಾರಣಕ್ಕಾಗಿ ಹಾನಗಲ್ನಲ್ಲಿ ನಮಗೆ ಹಿನ್ನಡೆಯಾಗಿದೆ ಎಂದು ಸಿದ್ದರಾಮಯ್ಯ ಹಿಗ್ಗುವ ಅಗತ್ಯವಿಲ್ಲ. ಜನ ಬರುವ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಎಚ್ಚರಿಸಿದರು.
15 ದಿನಗಳ ನಂತರ ಪ್ರತಿ ಜಿಲ್ಲೆಗೆ ತೆರಳಿ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸುತ್ತೇನೆ. ಪಕ್ಷ ಬಲಪಡಿಸುವಲ್ಲಿ ವಿಶೇಷವಾದ ಗಮನ ಕೊಡುತ್ತೇನೆ. ಇದು ಮುಂದಿನ ಚುನಾವಣೆಗೆ ದಿಕ್ಸೂಚಿ ಅಲ್ಲ. ಉಪಚುನಾವಣೆ ಅಷ್ಟೇ ಇದು. ಸಿಂದಗಿಯ ದೊಡ್ಡ ಅಂತರ ಸಮಾಧಾನ ತಂದಿದೆ. ಹಾನಗಲ್ನಲ್ಲಿ ಹಿನ್ನಡೆಯಾಗಿರುವುದು ಯಾಕೆ ಎಂದು ಅಲ್ಲಿಗೆ ತೆರಳಿ ವಿವರ ಪಡೆದು ಸಮಾಲೋಚನೆ ನಡೆಸುತ್ತೇನೆ ಎಂದರು.
ಸಿಎಂ ಬೊಮ್ಮಾಯಿ ನಾಯಕತ್ವದ ವೈಫಲ್ಯ ಎನ್ನುವ ಪ್ರಶ್ನೆ ಉದ್ಭವವಾಗಲ್ಲ. ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಚುನಾವಣೆ ಎದುರಿಸಿದ್ದೇವೆ. ಸೋಲು-ಗೆಲುವನ್ನು ಎಲ್ಲರೂ ಸಮಾನವಾಗಿ ಹಂಚಿಕೊಳ್ಳಬೇಕೇ ಹೊರತು ಯಾವುದೇ ಒಬ್ಬ ವ್ಯಕ್ತಿಯ ಮೇಲೆ ಕಟ್ಟುವುದು ಸರಿಯಲ್ಲ. ಅದನ್ನು ಹೇಳುವುದಕ್ಕೆ ನಾನು ಇಷ್ಟಪಡುವುದಿಲ್ಲ. ಮುಂಬರುವ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಪಕ್ಷವನ್ನು ಬಲಪಡಿಸುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸಿಂದಗಿಯಲ್ಲಿ ಬಿಜೆಪಿಗೆ ಗೆಲುವು : ರಮೇಶ ಭೂಸನೂರ್‌ಗೆ ಬಿಎಸ್‌ವೈ ಅಭಿನಂದನೆ