ಬೆಂಗಳೂರು : ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್ ಸಲ್ಲಿಸಿದ್ದರು. ಇದೀಗ ಸಂತೋಷ್ ಕುಟುಂಬದವರು ಪ್ರತಿಭಟನಾ ಅರ್ಜಿ ದಾಖಲಿಸಲಿದ್ದಾರೆ. ಪ್ರಕರಣ ಸಂಬಂಧ ವಿಚಾರಣೆ ನಡೆಸುತ್ತಿದ್ದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಏಪ್ರಿಲ್ 10ರಂದು ನ್ಯಾಯಾಲಯವು ಅರ್ಜಿದಾರರ ಪರ ವಕೀಲರ ವಾದ ಆಲಿಸಲಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಮತ್ತು ಸಹಚರರು ಕಾಮಗಾರಿ ಬಿಲ್ ಪಾವತಿಗೆ ಶೇ.40 ಕಮಿಷನ್ ಕೇಳುತ್ತಿದ್ದಾರೆ ಎಂದು ವಾಟ್ಸ್ಆ್ಯಪ್ ಸಂದೇಶ ಕಳುಹಿಸಿ ಗುತ್ತಿಗೆದಾರ ಸಂತೋಷ್, ಏಪ್ರಿಲ್ 12ರಂದು ಉಡುಪಿಯ ಲಾಡ್ಜ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಉಡುಪಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಚಿವರಾಗಿದ್ದ ಈಶ್ವರಪ್ಪ, ಬಸವರಾಜ ಕುರಿ, ರಮೇಶ್ ಹಾಗೂ ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್ ಹಾಗೂ ಶ್ರೀನಿವಾಸ್ ಮರಂಗಪ್ಪನವರ್ ಅವರನ್ನು ಪ್ರಕರಣದಲ್ಲಿ ಆರೋಪಿಗಳಾಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ತನಿಖಾಧಿಕಾರಿಗಳು ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಪ್ರಕರಣ ಕೈಬಿಡಲಾಗಿದೆ ಎಂದು 2022ರ ಜುಲೈ 20ರಂದು ವಿಶೇಷ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಇದರಿಂದ ಅತೃಪ್ತಿಗೊಂಡ ಸಂತೋಷ್ ಸಹೋದರ ಪ್ರಶಾಂತ್ ಪಾಟೀಲ್ ಉಡುಪಿ ಪೊಲೀಸರು ಬಿ ರಿಪೋರ್ಟ್ ಜೊತೆಗೆ ಸಲ್ಲಿಸಿರುವ ದಾಖಲೆಗಳನ್ನು ಒದಗಿಸಲು ನಿರ್ದೇಶಿಸುವಂತೆ ಕೋರಿ ನ್ಯಾಯಾಲಯಕ್ಕೆ 2022ರ ಆಗಸ್ಟ್ 23ರಂದು ಮನವಿ ಸಲ್ಲಿಸಿದ್ದರು.