ಬೆಂಗಳೂರು : ವಾಹನ ನಿಲುಗಡೆ ಮಾಹಿತಿ ನೀಡುವ ನಾಮಫಲಕವಿಲ್ಲದಿದ್ದರೆ ಆ ಪ್ರದೇಶವೂ ನೋ ಪಾರ್ಕಿಂಗ್ ಎಂದರ್ಥ. ಹೀಗಾಗಿ, ಅಂತಹ ಸ್ಥಳಗಳಲ್ಲೂ ವಾಹನ ನಿಲ್ಲಿಸಬಾರದು ಎಂದು ವಾಹನ ಸವಾರರಿಗೆ ನಗರ ಸಂಚಾರ ಇಲಾಖೆಯ ಜಂಟಿ ಪೊಲೀಸ್ ಆಯುಕ್ತ ಡಾ. ಬಿ ಆರ್ ರವಿಕಾಂತೇಗೌಡ ಮನವಿ ಮಾಡಿದ್ದಾರೆ.
ನಗರದಲ್ಲಿ ಟೋಯಿಂಗ್ ಸಿಬ್ಬಂದಿ ಮೇಲೆ ಸಾರ್ವಜನಿಕರ ಹಲ್ಲೆ ವಿಚಾರ ಕುರಿತು ಅವರು ಪ್ರತಿಕ್ರಿಯಿಸಿದರು. ಎಲ್ಲಾ ಪಾರ್ಕಿಂಗ್ ಬೋರ್ಡ್ ಹೊರತುಪಡಿಸಿ ಉಳಿದೆಲ್ಲ ಸ್ಥಳಗಳು ನೋ ಪಾರ್ಕಿಂಗ್ ಎಂದೇ ಪರಿಗಣಿಸಬೇಕು. ಬೋರ್ಡ್ ಹಾಕಿಲ್ಲ ಎಂದು ವಾಹನ ನಿಲ್ಲಿಸಬಾರದು ಎಂದರು.
ನಿಗದಿತ ಪ್ರದೇಶದಲ್ಲಿ ಪಾರ್ಕಿಂಗ್ ಸೌಲಭ್ಯವಿದ್ದರೆ ಅಲ್ಲೇ ಬೋರ್ಡ್ ಹಾಕಿರುತ್ತೇವೆ. ಬೆಂಗಳೂರಿನಲ್ಲಿ 14 ಸಾವಿರ ಕಿಲೋಮೀಟರ್ ರಸ್ತೆಯಿದೆ. ಪ್ರತಿ 100 ಮೀಟರ್ ಗೆ ನೋ ಪಾರ್ಕಿಂಗ್ ಬೋರ್ಡ್ ಹಾಕುವುದಕ್ಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮ ಗಮನಕ್ಕೆ ತರಬೇಕು : ಟೋಯಿಂಗ್ ಸಿಬ್ಬಂದಿಗೆ ಅವರದೇ ಆದ ಮಾನದಂಡಗಳಿವೆ. ಅದನ್ನು ಅವರು ಪಾಲಿಸಬೇಕು. ಟೋಯಿಂಗ್ ಸಿಬ್ಬಂದಿಯು ಕಾನೂನು ನಿಯಮ ಉಲ್ಲಂಘಿಸಿರುವುದು ಅಥವಾ ಅನುಚಿತ ವರ್ತನೆ ತೋರುವುದು ಕಂಡು ಬಂದರೆ, ನಮ್ಮ ಗಮನಕ್ಕೆ ತರಬೇಕು.