ಬೆಂಗಳೂರು:ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಹೆಸರಲ್ಲಿ ಕೃಷಿ ಚಟುಟಿಕೆ ಬಿಟ್ಟು, ರಿಯಲ್ ಎಸ್ಟೇಟ್ ಚಟುವಟಿಕೆ ಮಾಡಿದರೆ ನನ್ನ ವಿರೋಧ ಇದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
ವಿಕಾಸೌಧದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ಒಪ್ಪಿಗೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದರು. ಕೃಷಿ ವಿದ್ಯಾರ್ಥಿಗಳು ಬಹಳಷ್ಟು ಮಂದಿ ಇದ್ದಾರೆ. ಕೃಷಿಗೆ ತೊಡಗಿಸಿಕೊಳ್ಳುವವರಿಗೆ ಈ ಹಿಂದಿನ ಕಾನೂನು ಅನಾನುಕೂಲ ಆಗಿತ್ತು. ಈಗ ಕಾಯ್ದೆ ತಿದ್ದುಪಡಿಗೆ ಸಂಪುಟ ಸಭೆ ಅನುಮೋದನೆ ನೀಡಿದ್ದು, ಇದರಿಂದ ಕೃಷಿ ಮಾಡೋಕೆ ಭೂಮಿ ಖರೀದಿಸಬಹುದು ಎಂದು ಸಮರ್ಥಿಸಿಕೊಂಡರು.
ಕೃಷಿಗೆ ಮಾತ್ರ ಬಳಕೆ ಆಗಬೇಕು ಅನ್ನೋ ಬಗ್ಗೆ ಕಂದಾಯ ಇಲಾಖೆ ಕೆಲವು ನಿಬಂಧನೆಗಳನ್ನ ಹಾಕುತ್ತದೆ. ನಾನು ಕ್ಯಾಬಿನೆಟ್ನಲ್ಲಿ ಅದರ ಬಗ್ಗೆ ವಿರೋಧ ಮಾಡಿಲ್ಲ. ಕೃಷಿ ಅಲ್ಲದೇ ಇದ್ರೂ ಆಗ್ರೋ ಇಂಡಸ್ಟ್ರೀಸ್ ಮಾಡಬಹುದು. ಇದರಿಂದ ರಿಯಲ್ ಎಸ್ಟೇಟ್ ಲಾಬಿ ಆಗುತ್ತೆ ಅಂತ ನನಗೆ ಅನಿಸ್ತಿಲ್ಲ. ಕೃಷಿ ಚಟುವಟಿಕೆ ಹೆಸರಲ್ಲಿ ರಿಯಲ್ ಎಸ್ಟೇಟ್ ಮಾಡೋಕೆ ನನ್ನ ವಿರೋಧ ಇದೆ ಎಂದು ಇದೇ ವೇಳೆ ಸಚಿವರು ಸ್ಪಷ್ಟಪಡಿಸಿದರು.