ಬೆಂಗಳೂರು: ಅನಾಮಧೇಯ ಕಂಪನಿ ಹೆಸರಿನಲ್ಲಿ ರಸಗೊಬ್ಬರ ಅಥವಾ ಬಿತ್ತನೆ ಬೀಜಗಳನ್ನು ಯಾರಾದರು ನೀಡಿದರೆ ರೈತರು ಅದನ್ನು ಖರೀದಿಸಬಾರದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಅನಾಮಧೇಯ ಕಂಪನಿಯ ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಬೇಡಿ: ಸಚಿವ ಬಿ.ಸಿ.ಪಾಟೀಲ್ ಸಲಹೆ - ಕಳಪೆ ಗುಣಮಟ್ಟದ ರಸಗೊಬ್ಬರ ಮಾರಾಟ
ಅನಾಮಧೇಯ ಕಂಪನಿ ರೈತರ ಮನೆ ಬಾಗಿಲಿಗೆ ಬಿತ್ತನೆ ಬೀಜ, ರಸಗೊಬ್ಬರ ಸರಬರಾಜು ಮಾಡುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು, ರೈತರು ಇದನ್ನು ಖರೀದಿಸಬಾರದು ಎಂದು ಬಿ.ಸಿ.ಪಾಟೀಲ್ ಸಲಹೆ ನೀಡಿದ್ದಾರೆ.

ಕೆಲವು ಒಳಸಂಚುಗಳು ನಡೆಯುತ್ತಿದ್ದು, ಅನಾಮಧೇಯ ಕಂಪನಿ ರೈತರ ಮನೆ ಬಾಗಿಲಿಗೆ ಬಿತ್ತನೆ ಬೀಜ, ರಸಗೊಬ್ಬರ ಸರಬರಾಜು ಮಾಡುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಇಲಾಖೆ ಈ ಬಗ್ಗೆ ನಿಗಾ ವಹಿಸಿದೆ. ರೈತರಿಗೆ ಅನ್ಯಾಯವಾಗುವಂತಹ ನಕಲಿ ಜಾಲವನ್ನು ನಾವು ಎಂದಿಗೂ ಸಹಿಸುವುದಿಲ್ಲ. ಈ ಬಗ್ಗೆ ಸೂಕ್ತ ಕ್ರಮ ವಹಿಸಲಾಗುವುದು. ರೈತರು ಆದಷ್ಟು ಅಧಿಕೃತ ಕಂಪನಿಗಳ, ರೈತ ಸಂಪರ್ಕ ಕೇಂದ್ರ ಸೂಚಿಸಿದ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ, ಔಷಧಿಗಳನ್ನೇ ಖರೀದಿಸಿ ಬಳಸಬೇಕು ಎಂದರು.
ಇಂತಹ ಯಾವುದೇ ಅನಾಮಧೇಯ ಪ್ಯಾಕೇಟ್ ಬಂದಲ್ಲಿ ಅಥವಾ ಯಾರಾದರು ನೀಡಿದಲ್ಲಿ ಆ ಬಗ್ಗೆ ರೈತರು ಹಾಗೂ ಜನರು ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ನೀಡಬೇಕೆಂದು ಮಾಧ್ಯಮ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.