ಬೆಂಗಳೂರು: ಕೋವಿಡ್ ಆತಂಕದ ನಡುವೆಯೂ ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ ನಡೆಯುತ್ತಿದೆ. ಈಗಾಗಲೇ ನೀಡಿರುವ ದ್ವಿತೀಯ ಪಿಯುಸಿ ಫಲಿತಾಂಶವನ್ನು ತಿರಸ್ಕರಿಸಿರುವ 816 ಅಭ್ಯರ್ಥಿಗಳು, ಹಾಗೂ 17,598 ಖಾಸಗಿ ಅಭ್ಯರ್ಥಿಗಳು ಸೇರಿದಂತೆ ಒಟ್ಟು 18,414 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ನಗರದಲ್ಲಿ ಪಿಯುಸಿ ಪರೀಕ್ಷಾ ಕೊಠಡಿಗಳನ್ನು ಪರಿಶೀಲಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿದರು. ಪ್ರಾಥಮಿಕ ಶಾಲೆ ಆರಂಭದ ಕುರಿತು ಶೀಘ್ರದಲ್ಲಿಯೇ ನಿರ್ಧಾರ ಮಾಡಲಾಗುವುದು. 9 ರಿಂದ 12 ರವರೆಗಿನ ತರಗತಿ ಆರಂಭ ನೋಡಿಕೊಂಡು ಪ್ರಾಥಮಿಕ ಶಾಲೆ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಪ್ರಾಥಮಿಕ ಶಾಲೆಗಳ ಆರಂಭದ ಬಗ್ಗೆ ಸರ್ವೆ ಮಾಡುತ್ತೇವೆ. ಕೋವಿಡ್ ಎಷ್ಟು ಮಕ್ಕಳಿಗೆ ಬಂದಿತ್ತು. ಎಷ್ಟು ಶಾಲೆಯಲ್ಲಿ ಸಮಸ್ಯೆಯಾಗಿತ್ತು ಅಂತಾ ವರದಿ ಪಡೆದು ಶಾಲೆ ಆರಂಭದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಮಕ್ಕಳಿಗೆ ಈಗಾಗಲೇ ಶಾಲೆಗೆ ಬರಲು ಉತ್ಸಾಹ ಇದೆ. ಪೋಷಕರು ಕೂಡಾ ಸಹಕರಿಸಲಿದ್ದಾರೆ ಎಂದು ತಿಳಿಸಿದರು.
ಕಾಲೇಜುಗಳಿಗೆ ಸಚಿವರ ಭೇಟಿ, ಪರಿಶೀಲನೆ
ಸೈಂಟ್ ಆನ್ಸ್ ಮಹಿಳಾ ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು, ಕೋಟೆ, (ವಾಣಿ ವಿಲಾಸ) ಗೆ ಭೇಟಿ ನೀಡಿದರು. ನಂತರ ಈ ಬಗ್ಗೆ ಮಾತನಾಡಿದರು. ಇದುವರೆಗೆ ಎಲ್ಲಾ ಕಡೆ ಎಕ್ಸಾಂ ಚೆನ್ನಾಗಿ ನಡೆದಿದೆ. ಕೋವಿಡ್ ಎಸ್ಒಪಿಯನ್ನ ಸರಿಯಾಗಿ ಫಾಲೋ ಮಾಡಲಾಗಿದೆ. ಇಂದು ಗಣಿತ ವಿಷಯದ ಪರೀಕ್ಷೆ ನಡೆಯುತ್ತಿದೆ. ಹಲವು ಕಾಲೇಜುಗಳಲ್ಲಿ 100ರಷ್ಟು ವಿದ್ಯಾರ್ಥಿಗಳ ಹಾಜರಾತಿಯಾಗಿದೆ. ನಾಳೆ ಭಾಷಾ ವಿಷಯದ ಪರೀಕ್ಷೆ ನಡೆಯಲಿದ್ದು, ಮಕ್ಕಳ ಸಂಖ್ಯೆ ಹೆಚ್ಚಾಗಲಿದೆ. ಎಲ್ಲಾ ಅಧಿಕಾರಿಗಳು ಸೂಕ್ತ ಎಚ್ಚರಿಕೆ ವಹಿಸಿದ್ದಾರೆ ಎಂದರು.
ಯಾರೂ ಪರೀಕ್ಷೆಯಿಂದ ದೂರ ಉಳಿದಿಲ್ಲ
ಕೊರೊನಾದಿಂದ ಒಬ್ಬ ವಿದ್ಯಾರ್ಥಿಯೂ ಎಕ್ಸಾಂನಿಂದ ಹೊರಗಡೆ ಉಳಿದಿಲ್ಲ. ಎಸ್ಎಸ್ಎಲ್ಸಿ ಎಕ್ಸಾಂ ಮಾದರಿಯಲ್ಲಿಯೇ ಮಾಡಿ ಎಂದು ಕೇಳುತ್ತಿದ್ದರು ಅಷ್ಟೇ. ಖಾಸಗಿ ಅಭ್ಯರ್ಥಿಗಳಿಗೆ ಕೃಪಾಂಕ ವಿಚಾರ ಕೇಳಿ ಬಂದಿದೆ. ಕೋವಿಡ್ ಕಾರಣದಿಂದ ಹೆಚ್ಚು ಓದಲು ಅವಕಾಶ ಇತ್ತು. ಸಿದ್ಧತೆ ಮಾಡಿಕೊಳ್ಳಲು ಸಹ ಅವಕಾಶಗಳು ಇತ್ತು. ಆದರೆ, ಕೋವಿಡ್ ಕಾರಣದಿಂದ ಹೇಗಿರಬೇಕೆಂದು ಶಿಕ್ಷಣ ಇಲಾಖೆಯ ಮಟ್ಟದಲ್ಲಿ ಚರ್ಚೆ ಆಗಿಯೇ ಪರೀಕ್ಷೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲಾಗಿದೆ. ಎಲ್ಲರೂ ಉತ್ತೀರ್ಣರಾಗಲಿದ್ದಾರೆ ಎಂದು ತಿಳಿಸಿದರು.
ಹದಿನೈದು ದಿನಬ್ರಿಡ್ಜ್ ಕೋರ್ಸ್: ಶಾಲಾ ಆರಂಭದ ವಿಚಾರದಲ್ಲಿ ಎಚ್ಚರಿಕೆ ವಹಿಸಲಾಗಿದೆ. ಮಕ್ಕಳಿಗೆ ಶಾಲೆ ಆರಂಭದ 15 ದಿನಗಳ ಕಾಲ ಬ್ರಿಡ್ಜ್ ಕೋರ್ಸ್ ಮಾಡಲು ಸೂಚನೆ ನೀಡಲಾಗಿದೆ. ಕಳೆದ ಸಾಲಿನ ಪಠ್ಯಗಳ ಬಗ್ಗೆಯೂ ತಿಳಿಸಿಕೊಟ್ಟು ಮುಂದೆ ಹೋಗಬೇಕಾಗುತ್ತದೆ. ಮಕ್ಕಳು ಶಾಲೆ ವಾತಾವರಣದಿಂದ ಹೊರಗಿದ್ದ ಕಾರಣ ಹದಿನೈದು ದಿನ ಬ್ರಿಡ್ಜ್ ಕೋರ್ಸ್ ಮಾಡಲಾಗುವುದು ಎಂದರು.
ನೆಗೆಟಿವ್ ರಿಪೋರ್ಟ್ ಕಡ್ಡಾಯ: ಪರೀಕ್ಷೆ ವೇಳೆ ಕೊರೊನಾ ಮಾರ್ಗಸೂಚಿ ಪಾಲನೆ ಕಡ್ಡಾಯವಾಗಿದೆ. ಇಂದಿನಿಂದ ಸೆಪ್ಟೆಂಬರ್ 3 ರವರೆಗೆ ಪರೀಕ್ಷೆ ನಡೆಯಲಿದೆ. ರಾಜ್ಯದ 187 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ. ಕೋವಿಡ್ ಸೋಂಕು ಇದ್ದರೆ ಕೂಡಲೇ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಸೋಂಕಿತರಿಗೂ ಪರೀಕ್ಷೆ ಬರೆಯಲು ಅವಕಾಶ ಇದ್ದು, ಪ್ರತ್ಯೇಕ ಕೊಠಡಿ ಇರಲಿದೆ. ಹೊರರಾಜ್ಯ ಹಾಗೂ ಕೇರಳ ಗಡಿ ಜಿಲ್ಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ಕೂಡ ಆರ್ಟಿಪಿಸಿಆರ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ. 72 ಗಂಟೆಗಳ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ ಎಂದು ಸಚಿವರು ಇದೇ ವೇಳೆ ಸ್ಪಷ್ಟಪಡಿಸಿದರು.
ಓದಿ:ಸಿಎಂ ಆಗ್ಬೇಕು ಎಂದ್ರೆ HDD ಮನೇಲಿ, PM ಸ್ಥಾನ ಬೇಕೆಂದರೆ ನೆಹರೂ ಮನೇಲಿ ಹುಟ್ಬೇಕು: ಅಶೋಕ್ ವ್ಯಂಗ್ಯ