ಬೆಂಗಳೂರು: 1995 ರವರೆಗೆ ಅನ್ವಯವಾಗುವಂತೆ ಖಾಸಗಿ ಕನ್ನಡ ಶಾಲೆಗಳನ್ನು ಅನುದಾನಕ್ಕೊಳಪಡಿಸುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮತ್ತೊಮ್ಮೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಅ. ದೇವೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಸರ್ಕಾರಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡುತ್ತಿದ್ದು, 1986 ರಿಂದ ಅನುದಾನ ಸ್ಥಗಿತಗೊಳಿಸಿರುವುದಿಲ್ಲ. 01-06-1987 ರಿಂದ 1994-95ರವರೆಗೆ ಪ್ರಾರಂಭವಾಗಿ ನಿರಂತರವಾಗಿ ನಡೆಯುತ್ತಿರುವ ಕನ್ನಡ ಮಾಧ್ಯಮದ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಲು ಇಚ್ಛಿಸುವ ಆಡಳಿತ ಮಂಡಳಿಗಳು ಸಲ್ಲಿಸುವ ಪ್ರಸ್ತಾವನೆಯನ್ನು ನಿಯಮಾನುಸಾರ ಪರಿಶೀಲಿಸಿ ಕಾಲಕಾಲಕ್ಕೆ ಅನುದಾನಕ್ಕೆ ಒಳಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಖಾಸಗಿ ಕನ್ನಡ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವ ಕುರಿತು 2018 ರಲ್ಲಿ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 1995ರ ವರೆಗಿನ ಶಾಲೆಗಳನ್ನು ಅನುದಾನಕ್ಕೊಳಪಡಿಸಲು ನಿರ್ಧಾರ ಮಾಡಲಾಗಿದೆ. ನಂತರ ಚುನಾವಣೆ, ಕೋವಿಡ್ ಬಂತು. ಹಾಗಾಗಿ, ಅದರ ಅನುಷ್ಠಾನ ಆಗಿಲ್ಲ. ಈಗ ಮತ್ತೆ ಸಿಎಂ ಜೊತೆ ಸಭೆ ನಡೆಸಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಅನುದಾನಿತ ಶಾಲೆಗಳ ಹುದ್ದೆ ಭರ್ತಿಗೆ ಕ್ರಮ: ಖಾಸಗಿ ಅನುದಾನಿತ ಶಾಲೆಗಳ ಖಾಲಿ ಹುದ್ದೆ ಭರ್ತಿ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ವೈ. ಎ ನಾರಾಯಣಸ್ವಾಮಿ ವಿಷಯ ಪ್ರಸ್ತಾಪಿಸಿ, ಖಾಸಗಿ ಅನುದಾನಿತ ಶಾಲೆಗಳಲ್ಲಿ 7045 ಹುದ್ದೆ ಖಾಲಿ ಇವೆ. ಅನುದಾನಿತ ಶಾಲೆಗಳ ಖಾಲಿ ಹುದ್ದೆ ತುಂಬಲು ಎಲ್ಲ ಸರ್ಕಾರಗಳು ನಿರ್ಲಕ್ಷ್ಯ ಮಾಡುತ್ತಾ ಬರುತ್ತಿವೆ.
ಈಗ 2915 ಹುದ್ದೆಗೆ ಅನುಮತಿ ನೀಡಲಾಗಿದೆ. ಇನ್ನು 4,135 ಹುದ್ದೆಗೆ ಅನುಮತಿ ಕೊಟ್ಟಿಲ್ಲ. ಅನುಮತಿ ಕೊಟ್ಟಿರೋದರಲ್ಲಿಯೂ ಅರ್ಧದಷ್ಟೂ ಭರ್ತಿ ಮಾಡಿಕೊಳ್ಳಲಾಗಿಲ್ಲ. ಸರ್ಕಾರಕ್ಕೆ ಅನುದಾನಿತ ಶಾಲೆಗಳ ಮೇಲಿರುವ ಧೋರಣೆಗಳೇನು?, ಖಾಲಿ ಹುದ್ದೆ ಭರ್ತಿಗೆ ಯಾಕೆ ಅನುಮತಿ ಕೊಡುತ್ತಿಲ್ಲ. ಖಾಲಿ ಆಗುವ ಹುದ್ದೆಗಳ ಮಾಹಿತಿ ಸರ್ಕಾರಕ್ಕೆ ಇರುತ್ತೆ. ಮೊದಲೇ ಏಕೆ ಭರ್ತಿಗೆ ಕ್ರಮ ಕೈಗೊಳ್ಳಲ್ಲ ಎಂದು ಪ್ರಶ್ನಿಸಿದರು.
ಇದಕ್ಕೆ ದನಿಗೂಡಿಸಿದ ಬಿಜೆಪಿ ಸದಸ್ಯ ಪುಟ್ಟಣ್ಣ, ಖಾಲಿ ಹುದ್ದೆ ಭರ್ತಿಗೆ ಹಣಕಾಸು ಇಲಾಖೆ ಅನುಮತಿ ನೀಡಿದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇಲ್ಲಸಲ್ಲದ ಕಾರಣ ನೀಡಿ ಹುದ್ದೆ ಭರ್ತಿಗೆ ಮುಂದಾಗುತ್ತಿಲ್ಲ. ಇಲ್ಲಸಲ್ಲದ ಕ್ವಯಿರಿ ಹಾಕಿ ತಡೆ ಒಡ್ಡುತ್ತಿದ್ದಾರೆ. ಇದನ್ನ ನಿವಾರಿಸಬೇಕು. ಕೇವಲ ಪತ್ರಿಕೆಗಳಲ್ಲಿ ಜಾಹೀರಾತು ಸರಿಯಾಗಿ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ 200ಕ್ಕೂ ಹೆಚ್ಚಿನ ಹುದ್ದೆ ಭರ್ತಿ ಮಾಡುವುದನ್ನು ತಡೆ ಹಿಡಿದಿರುವುದು ಸರಿಯಲ್ಲ. ಕೂಡಲೇ ಇದನ್ನು ಸರಿಪಡಿಸಬೇಕು ಎಂದರು.