ಬೆಂಗಳೂರು: ಮೂರು ವರ್ಷ ಹಿಂದೆ ಅಗ್ನಿ ಸುರಕ್ಷತೆಯ ವಿಚಾರವಾಗಿ ಬಂದ ಆದೇಶ ಪಾಲನೆ ಅನಿವಾರ್ಯವಾಗಿದೆ. ಸಾಧ್ಯವಾದಷ್ಟು ಶಾಲೆಗಳಲ್ಲಿ ಆದೇಶ ಪಾಲನೆಗೆ ಪ್ರಯತ್ನಿಸುತ್ತಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. ರಾಜ್ಯದಲ್ಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಅಗ್ನಿ ಸುರಕ್ಷತೆಯ ಕುರಿತು ನಡೆದ ಚರ್ಚೆಗೆ ಅವರು ಉತ್ತರಿಸಿದರು.
ನಾವು ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡುವಂತಿಲ್ಲ. ಆದಷ್ಟು ಸುಗಮವಾಗಿ ಸಮಸ್ಯೆ ಪರಿಹರಿಸಲು ಯತ್ನಿಸುತ್ತೇವೆ. ಶುಲ್ಕ ನಿಗದಿಗೂ ಚಿಂತನೆ, ಪರಿಶೀಲನೆ ನಡೆಯುತ್ತಿದೆ. ಸೂಕ್ತ ಸುರಕ್ಷತಾ ವಿಧಾನ ಅಳವಡಿಸಿಕೊಳ್ಳಲು ಸೂಚಿಸುತ್ತಿದ್ದೇವೆ. ಈ ಹಿಂದೆ ಕಾನೂನಿನಲ್ಲಿ ಆದ ಕೆಲ ಬದಲಾವಣೆ ಸರಿಪಡಿಸಲು ಯತ್ನ ನಡೆಸಿದ್ದೇವೆ. ಶಿಕ್ಷಣ ಸಂಸ್ಥೆಗಳು ಮನಸ್ಸಿಗೆ ಬಂದಂತೆ ನಡೆದುಕೊಳ್ಳಬಾರದು. ಶಿಕ್ಷಣ ಇಲಾಖೆಯಲ್ಲಿ ಆಗಿರುವ ಸಮಸ್ಯೆ ಇದ್ದರೆ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳೋಣ ಎಂದು ಹೇಳಿದರು.
ಶಾಲೆಯನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸ್ಥಳಾಂತರಿಸಿ ಈಗ ಬದಲಾವಣೆಗೆ ಮನವಿ ಮಾಡಿದ್ದಾರೆ. ಇದೆಲ್ಲವೂ ಶಿಕ್ಷಣ ಸಂಸ್ಥೆಗಳು ನಡೆದುಕೊಳ್ಳುವ ರೀತಿ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸದಸ್ಯರಾದ ಹರೀಶ್ ಕುಮಾರ್ ಪ್ರಸ್ತಾಪಿಸಿದ ವಿಚಾರದ ಮೇಲೆ ಶ್ರೀಕಂಠೇಗೌಡ, ಮರಿತಿಬ್ಬೇಗೌಡ, ಎಸ್. ವಿ ಸಂಕನೂರು, ಅರುಣ್ ಶಹಾಪೂರ್, ಭೋಜೇಗೌಡ ಮತ್ತಿತರ ಸದಸ್ಯರು ಮಾತನಾಡಿದರು.