ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿ ಅಕ್ರಮ ನಡೆದಿದ್ದು ಇದರಲ್ಲಿ ಸಚಿವ ಬಿ.ಸಿ.ನಾಗೇಶ್ ಪಾಲು ಎಷ್ಟು ಎಂದು ಪ್ರಶ್ನಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ಇದಕ್ಕೆ ಬಿ.ಸಿ.ನಾಗೇಶ್ ಟ್ವೀಟ್ ಮೂಲಕವೇ ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಶಿಕ್ಷಣ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ರುಪ್ಸಾ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ. ಲಂಚ ಪಡೆದು ಖಾಸಗಿ ಶಾಲೆಗಳಿಗೆ ಬೇಕಾಬಿಟ್ಟಿ ಅನುಮತಿ ನೀಡಿದ್ದ ಇಲಾಖೆಯೇ ಅಕ್ರಮ ಮುಚ್ಚಿಹಾಕಲು ಲಂಚ ಕೇಳುತ್ತಿದೆಯಂತೆ. ಇದರಲ್ಲಿ ಬಿ.ಸಿ.ನಾಗೇಶ್ ಪಾಲೆಷ್ಟು? ಎಂದು ಸಿದ್ಧರಾಮಯ್ಯ ಟೀಕಿಸಿದ್ದರು.
ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಬಿ.ಸಿ.ನಾಗೇಶ್, ನಿಮ್ಮ ಸರ್ಕಾರದ ಅವಧಿಯಲ್ಲಿ ಖಾಸಗಿ ಸಿಬಿಎಸ್‌ಸಿ ಶಾಲೆಗಳ ಆರಂಭಕ್ಕೆ ಎನ್ಒಸಿ ನೀಡಲು ನಿಯಮಗಳನ್ನೇ ರೂಪಿಸದೆ, ಅನಧಿಕೃತವಾಗಿ ಹಲವು ಶಾಲೆಗಳನ್ನು ಆರಂಭಿಸಲು ಅವಕಾಶ ಮಾಡಿಕೊಟ್ಟು, ಅಕ್ರಮಕ್ಕೆ ಕುಮ್ಮಕ್ಕು ನೀಡಿರುವುದರಲ್ಲಿ ಸಿದ್ದರಾಮಯ್ಯ ಪಾತ್ರ ಏನು? ಎಂದಿದ್ದಾರೆ.
ಪಾರದರ್ಶಕ, ಪ್ರಾಮಾಣಿಕ, ಸುರಕ್ಷಿತ ಶೈಕ್ಷಣಿಕ ವಾತಾವರಣ ನಿರ್ಮಿಸಲು ಹೊರಟ ಬಿಜೆಪಿ ಸರ್ಕಾರದ ವಿರುದ್ಧ ಕ್ರಿಮಿನಲ್ ಕೇಸ್ ಸೇರಿ ಹಲವು ಆರೋಪಗಳಿರುವ ಬೆಂಬಲಿಗನ ಮೂಲಕ ಆಧಾರರಹಿತ ಆರೋಪಗಳನ್ನು ಮಾಡಿಸಿ, ನಿಯಮಬಾಹಿರ ಕೆಲಸಗಳಿಗೆ ಕುಮ್ಮಕ್ಕು ನೀಡುತ್ತಿರುವ ನಿಮಗೆ ಮಾತನಾಡಲು ಯಾವ ನೈತಿಕತೆ ಇದೆ? ನಿಯಮಬಾಹಿರ ಕೆಲಸಗಳಲ್ಲಿ ನಿಮ್ಮ ಪಾಲೆಷ್ಟು? ಎಂದಿದ್ದಾರೆ.
2004ರಲ್ಲಿ ತಮಿಳುನಾಡಿನ ಕುಂಭಕೋಣಂನ ಶಾಲೆಯೊಂದರಲ್ಲಿ ನಡೆದ ಅಗ್ನಿದುರಂತದ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ಆದೇಶದ ಅನುಸಾರ ರೂಪಿಸಿರುವ ನಿಯಮಗಳು, ಮಾರ್ಗಸೂಚಿಗಳನ್ನೇ ನೀವು ಪ್ರಶ್ನಿಸುತ್ತಿದ್ದೀರಿ. ಶಾಲಾ ಮಕ್ಕಳ ಸುರಕ್ಷತೆ ಬಗ್ಗೆ ಸಿದ್ದರಾಮಯ್ಯ ಅವರೇ ನಿಮಗೆ ಕಾಳಜಿ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಖಾಸಗಿ ಶಾಲೆ ಪ್ರಥಮ ಮಾನ್ಯತೆ ಅಂಡ್ ಮಾನ್ಯತೆ ನವೀಕರಣ ಪ್ರಕ್ರಿಯೆಯನ್ನು ಆನ್‌ಲೈನ್‌ಗೊಳಿಸಿ, ಪಾರದರ್ಶಕ ವ್ಯವಸ್ಥೆಯನ್ನು ನಮ್ಮ ಸರ್ಕಾರ ಅನುಷ್ಠಾನಗೊಳಿಸಿದೆ. ಆದರೆ, ಶಿಸ್ತುಬದ್ಧ ವ್ಯವಸ್ಥೆಯ ಅನುಷ್ಠಾನದ ವಿರುದ್ಧವೇ ನಿಂತು, ಸಂಘಟನೆಯ ಅಧ್ಯಕ್ಷನೆಂದು ಹೇಳಿಕೊಂಡು ಓಡಾಡುವ ಬೂಟಾಟಿಕೆಯ ವ್ಯಕ್ತಿಯ ಅಕ್ರಮದಲ್ಲಿ ಸಿದ್ದರಾಮಯ್ಯ ಪಾಲೆಷ್ಟು? ಎಂದು ಸಚಿವ ಬಿ.ಸಿ.ನಾಗೇಶ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಮೊದಲು ಸಿಮ್ಸ್ ಡೀನ್, ಡಿಡಿಪಿಐ ಚಳಿ ಬಿಡಿಸಿದ ಸೋಮಣ್ಣ; ನಂತರ ಹೋರಾಟಗಾರರಿಂದ ಸಚಿವರಿಗೆ ತರಾಟೆ!