ಕರ್ನಾಟಕ

karnataka

ETV Bharat / state

ಆರು ತಿಂಗಳಲ್ಲಿ ರಾಜ್ಯದ ಎಲ್ಲರಿಗೂ ಆಯುಷ್ಮಾನ್ ಕಾರ್ಡ್: ಸಚಿವ ಸುಧಾಕರ್

ಪ್ರಧಾನಿ ಮೋದಿಯವರು ಆಯುಷ್ಮಾನ್ ಕಾರ್ಡ್ ಮೂಲಕ ಜನರ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ. ಈ ಕಾರ್ಡ್ ಎಲ್ಲರಿಗೂ ದೊರೆಯುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕಿದೆ ಎಂದು ಸಚಿವ ಸುಧಾಕರ್​ ತಿಳಿಸಿದರು.

health minister k sudhakar
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

By

Published : Apr 30, 2022, 8:40 PM IST

ಬೆಂಗಳೂರು: ಆಯುಷ್ಮಾನ್ ಭಾರತ್ ಯೋಜನೆಯಡಿ ರಾಜ್ಯದ ಪ್ರತಿ ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿ ಎಲ್ಲರಿಗೂ ಆಯುಷ್ಮಾನ್ ಕಾರ್ಡುಗಳು ದೊರೆಯುವಂತೆ ಮಾಡಬೇಕು. ಆರು ತಿಂಗಳಲ್ಲಿ ರಾಜ್ಯದ ಎಲ್ಲರಿಗೂ ಈ ಕಾರ್ಡ್ ವಿತರಿಸುವ ಕಾರ್ಯ ನಿರ್ವಹಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಆಯುಷ್ಮಾನ್ ಭಾರತ್ ದಿನ ಅಂಗವಾಗಿ ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ 'ಆರೋಗ್ಯ ಮಂಥನ' ವರ್ಚುವಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ವಿವಿಧ ಜಿಲ್ಲೆಗಳ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ವೈದ್ಯರು, ಸಿಬ್ಬಂದಿ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಚರ್ಚೆ ನಡೆಸಿದರು. ಪ್ರಧಾನಿ ಮೋದಿಯವರು ಆಯುಷ್ಮಾನ್ ಕಾರ್ಡ್ ಮೂಲಕ ಜನರ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ. ಈ ಕಾರ್ಡ್ ಎಲ್ಲರಿಗೂ ದೊರೆಯುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕಿದೆ ಎಂದರು.

ಹೂವಿನ ಹಡಗಲಿಯ ಮೈಲಾರ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ 60 ವರ್ಷದ ಪ್ರಸನ್ನ ಮಾತನಾಡಿ, 10 ವರ್ಷದಿಂದ ಬಿಪಿ ಹಾಗೂ ಮಧುಮೇಹವಿದ್ದು, ದಾವಣಗೆರೆ, ಹಾವೇರಿ ಮೊದಲಾದ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ಈಗ ನಮ್ಮ ಊರಿನ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲೇ ಚಿಕಿತ್ಸೆ ಪಡೆಯುತ್ತಿದ್ದೇನೆ. ಪ್ರತಿ ತಿಂಗಳು ಉಚಿತವಾಗಿ ಮಾತ್ರೆ ದೊರೆಯುತ್ತಿದ್ದು, ಮಧುಮೇಹ ನಿಯಂತ್ರಣಕ್ಕೆ ಬಂದಿದೆ ಎಂದರು.

ಆಹಾರ ಮತ್ತು ವ್ಯಾಯಾಮ ಕುರಿತು ಮಾರ್ಗದರ್ಶನ ದೊರೆತಿದೆಯೇ ಎಂದು ಸಚಿವ ಡಾ.ಕೆ.ಸುಧಾಕರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಸನ್ನ, ಪ್ರತಿ ದಿನ ವಾಕಿಂಗ್ ಹಾಗೂ ವ್ಯಾಯಾಮ ಮಾಡಲು ಮಾರ್ಗದರ್ಶನ ದೊರೆತಿದೆ. ಯೋಗವನ್ನೂ ಮಾಡುತ್ತಿದ್ದೇನೆ ಎಂದು ಹೇಳಿದರು.

1-2 ಸಾವಿರ ಬದಲು 500 ರೂ. ಖರ್ಚು: ಬೆಂಗಳೂರಿನ ಯಲಹಂಕದ ಜನ ಔಷಧಿ ಕೇಂದ್ರದ ಫಲಾನುಭವಿ ವಸಂತ್ ಮಾತನಾಡಿ, ಜನ ಔಷಧಿ ಕೇಂದ್ರದಿಂದಾಗಿ ಮಧುಮೇಹದ ಔಷಧಿಯ ಖರ್ಚು ತಿಂಗಳಿಗೆ 2-3 ಸಾವಿರ ರೂ. ಕಡಿಮೆಯಾಗಿದೆ. 1-2 ಸಾವಿರ ರೂ. ಬದಲು ಕೇವಲ 500 ರೂ.ಗೆ ಔಷಧಿ ಇಲ್ಲಿ ದೊರೆಯುತ್ತಿದೆ ಎಂದು ಹೇಳಿಕೊಂಡರು.

ಯಲಹಂಕದ ಜನೌಷಧಿ ಕೇಂದ್ರದ ನೇತ್ರಾ ಮಾತನಾಡಿ, ಆರಂಭದಲ್ಲಿ 90 ಸಾವಿರ ಔಷಧಿ ಪೂರೈಕೆಯಾಗುತ್ತಿದ್ದು, ದಿನಕ್ಕೆ 100-200 ಮಾತ್ರ ಮಾರಾಟವಾಗುತ್ತಿತ್ತು. ಈಗ ದಿನಕ್ಕೆ ಸುಮಾರು 20 ಸಾವಿರದಷ್ಟು ಔಷಧಿ ಮಾರಾಟವಾಗುತ್ತಿದೆ. ಇಡೀ ದೇಶದಲ್ಲಿ 1 ಲಕ್ಷ ಔಷಧಿ ಮಾರಾಟ ಗುರಿಯನ್ನು ನಾವು ತಲುಪಿದ್ದೇವೆ ಎಂದು ತಿಳಿಸಿದರು.

ವೈದ್ಯಕೀಯ ತಪಾಸಣೆಗೆ ಸೂಚನೆ: ರಾಜ್ಯದ ಪ್ರತಿ ಆರೋಗ್ಯ ಉಪ ಕೇಂದ್ರ ವ್ಯಾಪ್ತಿಯಲ್ಲಿ ಎಲ್ಲರಿಗೂ ರಕ್ತದೊತ್ತಡ ಹಾಗೂ ಮಧುಮೇಹ ತಪಾಸಣೆ ನಡೆಯಬೇಕಿದೆ. ಬಳಿಕ ಈ ಅಂಕಿ ಅಂಶವನ್ನು ಇಲಾಖೆಗೆ ಕಳುಹಿಸಿಕೊಡಬೇಕು. ಇದನ್ನು ಎಲ್ಲಾ ವೈದ್ಯರು ಜನಾಂದೋಲನದಂತೆ ಮಾಡಿ ಎಂದು ಸಚಿವ ಸುಧಾಕರ್ ಕರೆ ನೀಡಿದರು.

ಕರ್ನಾಟಕಕ್ಕೆ ಪ್ರಥಮ ಸ್ಥಾನ: ವರ್ಚುವಲ್ ಕಾರ್ಯಕ್ರಮದ ಬಳಿಕ ಮಾತನಾಡಿದ ಸಚಿವರು, ಆಯುಷ್ಮಾನ್ ಭಾರತ್ ಯೋಜನೆಯ ಅನುಷ್ಠಾನದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಕಳೆದ ವರ್ಷ 960 ಕೋಟಿ ರೂ.ಗೂ ಅಧಿಕ ಹಣವನ್ನು ನೀಡಲಾಗಿದೆ. 6.68 ಕೋಟಿ ಜನರು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಸೇವೆ ಪಡೆದಿದ್ದಾರೆ. 997 ಜನೌಷಧಿ ಕೇಂದ್ರಗಳು ರಾಜ್ಯದಲ್ಲಿದ್ದು, ಇಡೀ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ ಎಂದರು.

ಅಸಾಂಕ್ರಾಮಿಕ ರೋಗಗಳ ತಪಾಸಣೆ, ಚಿಕಿತ್ಸೆಗೆ ವೈದ್ಯರು ಹೆಚ್ಚು ಒತ್ತು ನೀಡಬೇಕು. ಮಧುಮೇಹಿಗಳ ಆಹಾರ ಶೈಲಿ, ನಿತ್ಯದ ಚಟುವಟಿಕೆಗಳು ಬದಲಾಗಬೇಕು. ಇದಕ್ಕಾಗಿ ವೈದ್ಯರು ರೋಗಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. 2025ಕ್ಕೆ ಕ್ಷಯ ರೋಗವನ್ನು ರಾಜ್ಯದಿಂದ ನಿರ್ಮೂಲನೆ ಮಾಡುವ ಗುರಿ ಇದೆ. ಇದರಲ್ಲಿ ವೈದ್ಯರು, ಸಿಬ್ಬಂದಿ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ರಂಜಾನ್ ಹಬ್ಬಕ್ಕೆ ಮೇ 3ರ ಬದಲು ಮೇ 2ರಂದು ಸಾರ್ವತ್ರಿಕ ರಜೆ ಘೋಷಣೆ

ABOUT THE AUTHOR

...view details