ಕರ್ನಾಟಕ

karnataka

ETV Bharat / state

ಆಯುಧ ಪೂಜೆ, ವಿಜಯದಶಮಿ ಹಬ್ಬ: ಬೆಂಗಳೂರಿನಲ್ಲಿ ಭಾರಿ ಪ್ರಮಾಣದ ಹೆಚ್ಚುವರಿ ತ್ಯಾಜ್ಯ ಉತ್ಪತ್ತಿ - ಈಟಿವಿ ಭಾರತ್ ಕನ್ನಡ ಸುದ್ದಿ

ಬೆಂಗಳೂರು ನಗರದ ಬಹುತೇಕ ಕಡೆ ಕಸದ ರಾಶಿ ಕಂಡುಬರುತ್ತಿದೆ.

ಕಸದ ರಾಶಿ
ಕಸದ ರಾಶಿ

By ETV Bharat Karnataka Team

Published : Oct 24, 2023, 9:56 PM IST

Updated : Oct 24, 2023, 10:16 PM IST

ಬೆಂಗಳೂರು:ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಭಾರಿ ಪ್ರಮಾಣದ ಹೆಚ್ಚುವರಿ ತ್ಯಾಜ್ಯ ಉತ್ಪತ್ತಿಯಾಗಿದ್ದು, ಬಹುತೇಕ ಕಡೆ ಕಸ ರಾಶಿ ಬಿದ್ದಿರುವುದು ಕಂಡುಬರುತ್ತಿದೆ. ಮಾರುಕಟ್ಟೆ, ಜನಸಂದಣಿಯಿದ್ದ ಪ್ರದೇಶದಲ್ಲಿ ಮಾರಾಟವಾಗದೇ ಉಳಿದ ಬಾಳೆಕಂಬ, ಬೂದುಗುಂಬಳ ಅಲ್ಲಲ್ಲೇ ಬಿದ್ದಿದ್ದು, ಶೀಘ್ರ ವಿಲೇವಾರಿಯಾಗದೇ ಇದ್ದಲ್ಲಿ ಕೊಳೆತು ಗಬ್ಬು ನಾರುವ ಸ್ಥಿತಿಗೆ ತಲುಪಲಿದೆ. ಸಾಮಾನ್ಯ ದಿನಗಳಲ್ಲಿ ನಗರದಲ್ಲಿ 4,000 ಟನ್ ತ್ಯಾಜ್ಯ ಉತ್ಪತ್ತಿಯಾದರೆ, ಹಬ್ಬದ ಸಂದರ್ಭದಲ್ಲಿ ಶೇ. 20ರಿಂದ ಶೇ. 30ರಷ್ಟು ಹೆಚ್ಚುವರಿ ತ್ಯಾಜ್ಯ ಉತ್ಪತ್ತಿಯಾಗಿದೆ. ಈ ಹೆಚ್ಚುವರಿ ತ್ಯಾಜ್ಯ ಪಾಲಿಕೆಗೆ ಸವಾಲಾಗಿ ಪರಿಣಮಿಸಿದೆ.

ಕಸದ ರಾಶಿ

ಮಡಿವಾಳ ಮಾರುಕಟ್ಟೆ, ಯಶವಂತಪುರ, ಗಾಂಧಿ ಬಜಾರ್, ಮಲ್ಲೇಶ್ವರ ಸೇರಿದಂತೆ ನಾನಾ ಮಾರುಕಟ್ಟೆಗಳಲ್ಲಿ ಬಾಳೆಕಂಬ, ಬೂದಗುಂಬಳ ರಾಶಿ ಬಿದ್ದಿದೆ. ಸಾರಕ್ಕಿ ಮಾರುಕಟ್ಟೆಯ ಬಳಿಯ ಮೆಟ್ರೊ ಮಾರ್ಗದ ಪಿಲ್ಲರ್ ಸುತ್ತಲೂ ಮಾರಾಟವಾಗದ ಬಾಳೆಕಂಬ, ರಸ್ತೆಗಳಲ್ಲಿ ಬೂದಗುಂಬಳ, ಮಾವಿನಸೊಪ್ಪಿನ ರಾಶಿಗಳನ್ನು ಕಾಣಬಹುದು.

ಹಬ್ಬದ ನಂತರ ಉಳಿಯುವ ವಸ್ತುಗಳನ್ನು ರಸ್ತೆಯಲ್ಲೇ ರೈತರು ಮತ್ತು ವ್ಯಾಪಾರಿಗಳು ರಾಶಿ ಹಾಕಿ ಹೋಗಿದ್ದಾರೆ. ಹೀಗಾಗಿ ರಸ್ತೆ ರಸ್ತೆಗಳಲ್ಲಿ ಬಾಳೆ ಕಂಬ, ಬೂದುಕುಂಬಳಕಾಯಿ, ಮಾವಿನ ಸೊಪ್ಪಿನ ಕಸ ಕಂಡು ಬರುತ್ತಿದೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಧ್ಯೆ ಕೆಲವರು ಕಸದ ರಾಶಿಗೆ ಬೆಂಕಿ ಹಚ್ಚುವುದು ಹೆಚ್ಚಾಗಿದ್ದು, ನೈರ್ಮಲ್ಯ ಇನ್ನಷ್ಟು ಹಾಳಾಗುವಂತಾಗಿದೆ. ಕಸದೊಂದಿಗೆ ಪ್ಲಾಸ್ಟಿಕ್ ತ್ಯಾಜ್ಯವು ಸುಟ್ಟು ಪರಿಸರಕ್ಕೆ ಇನ್ನಷ್ಟು ಹಾನಿಯಾಗುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಸದ ರಾಶಿ

ಹಬ್ಬದ ಸಂದರ್ಭದಲ್ಲಿ ಉತ್ಪತ್ತಿಯಾಗಿರುವ ಹೆಚ್ಚುವರಿ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ. ಭಾರಿ ಪ್ರಮಾಣದ ಬಾಳೆಕಂಬ, ಬೂದಗುಂಬಳ ರಾಶಿಯಿರುವ ಕಡೆ ಜೆಸಿಬಿ ಬಳಸಿ ತೆರವುಗೊಳಿಸಲಾಗುತ್ತಿದೆ. ಇನ್ನೊಂದು ದಿನದಲ್ಲಿ ಸಂಪೂರ್ಣ ತ್ಯಾಜ್ಯ ವಿಲೇವಾರಿಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ ಮತ್ತು ಭಗ್ನಾವಶೇಷ ವಿಲೇವಾರಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ ಮತ್ತು ಭಗ್ನಾವಶೇಷ ವಿಲೇವಾರಿ ನಿಯಮ ಮೀರಿದರೆ ಕಠಿಣ ಕ್ರಮ ಕೈಗೊಳ್ಳುವ ಜೊತೆಗೆ ದಂಡವನ್ನೂ ವಿಧಿಸಲಾಗುತ್ತದೆ ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು (ಸೆಪ್ಟೆಂಬರ್ 19-2023) ಎಚ್ಚರಿಕೆ ನೀಡಿದ್ದರು. ನಗರದ ಹೊರವಲಯದಲ್ಲಿ ಪಾಲಿಕೆಯ ವ್ಯಾಪ್ತಿಯ ಹೊರಗಡೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಬದಿಯಲ್ಲಿ /ಇಕ್ಕೆಲಗಳಲ್ಲಿ ಅನಧಿಕೃತ ಅನಾಮಧೇಯ ವ್ಯಕ್ತಿಗಳಿಂದ / ಎಜೆನ್ಸಿಗಳಿಂದ ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯದ ಅನಧಿಕೃತ ವಿಲೇವಾರಿಯು ಅತಿರೇಕವಾಗಿ ನಡೆಯುತ್ತಿರುವುದನ್ನು ಗಮನಿಸಲಾಗಿದ್ದು, ಈ ಪ್ರವೃತ್ತಿಯು ನಗರಕ್ಕೆ ಸಂಚರಿಸುವ ಸಾರ್ವಜನಿಕರಲ್ಲಿ ಬೆಂಗಳೂರು ನಗರದ ಸ್ವಚ್ಛತೆಯ ಕುರಿತು ಋಣಾತ್ಮಕ ಮನೋಭಾವನೆಯನ್ನು ಉಂಟುಮಾಡುವುದಲ್ಲದೇ ನಗರದ ಘನತೆ ಕುಂದಿಸುತ್ತಿರುವುದನ್ನು ಅತೀ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಪಾಲಿಕೆ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿತ್ತು.

ಇದನ್ನೂ ಓದಿ:ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ ಮತ್ತು ಭಗ್ನಾವಶೇಷ ವಿಲೇವಾರಿ ನಿಯಮ ಮೀರಿದರೆ ಕಠಿಣ ಕ್ರಮ

Last Updated : Oct 24, 2023, 10:16 PM IST

ABOUT THE AUTHOR

...view details