ಬೆಂಗಳೂರು: ಕರ್ನಾಟಕದಲ್ಲಿ ರಾಮಮಂತ್ರವನ್ನು ಮೊಳಗಿಸಲು ಬಿಜೆಪಿ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದ ಪ್ರಮುಖ ಸಚಿವರು ಅಯೋಧ್ಯೆ ಯಾತ್ರೆಗೆ ಸಜ್ಜಾಗಿದ್ದಾರೆ.
ಹಳೆ ಮೈಸೂರು ಭಾಗದಲ್ಲಿ ಪ್ರಸಿದ್ಧವಾಗಿರುವ ರಾಮನಗರದ ರಾಮದೇವರ ಬೆಟ್ಟವನ್ನು ಹಿಂದುಗಳ ಶ್ರದ್ಧಾ ಕೇಂದ್ರವನ್ನಾಗಿ ರೂಪಿಸಲು ಬಿಜೆಪಿ ಮುಂದಾಗಿದ್ದು, ಇದಕ್ಕೆ ಚಾಲನೆ ನೀಡಲು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಅವರು ಅಯೋಧ್ಯೆ ಯಾತ್ರೆ ಆರಂಭಿಸಲಿದ್ದಾರೆ.
ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರು 150 ಮಂದಿಯ ಜತೆಗೂಡಿ ಅಯೋಧ್ಯೆಗೆ ತೆರಳಲಿದ್ದು, ಗುರುವಾರ ಅಯೋಧ್ಯೆಯಲ್ಲಿ ರಾಮನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ರಾಮನಗರ ಜಿಲ್ಲೆಯ ರಾಮದೇವರ ಬೆಟ್ಟಕ್ಕೆ ಪೌರಾಣಿಕ ಹಿನ್ನೆಲೆ ಇದ್ದು, ವನವಾಸದ ಕಾಲದಲ್ಲಿ ಶ್ರೀರಾಮಚಂದ್ರ ಇಲ್ಲಿಗೆ ಭೇಟಿ ನೀಡಿದ್ದ ಎಂಬ ನಂಬಿಕೆಯಿದೆ.
ಈ ನಂಬಿಕೆಯ ಕಾರಣಕ್ಕಾಗಿ ರಾಮದೇವರ ಬೆಟ್ಟದ ಪುರಾತನ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡಿ ರಾಮನಿಗಾಗಿ ದೊಡ್ಡ ದೇವಸ್ಥಾನವನ್ನು ನಿರ್ಮಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದಾಗಲೇ ಸೂಚನೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದರ ಭಾಗವಾಗಿಯೇ ಸಚಿವ ಡಾ ಅಶ್ವತ್ಥನಾರಾಯಣ ಅವರು ಇಂದು ಅಯೋಧ್ಯೆಗೆ ತೆರಳಲಿದ್ದಾರೆ.
ಈ ಬೆಳವಣಿಗೆ ರಾಜಕೀಯ ವಲಯಗಳಲ್ಲಿ ಕುತೂಹಲ ಕೆರಳಿಸಿದ್ದು, ಹಳೆ ಮೈಸೂರು ಭಾಗದಲ್ಲಿ ರಾಮಮಂತ್ರವನ್ನು ದೊಡ್ಡ ಮಟ್ಟದಲ್ಲಿ ಮೊಳಗಿಸುವ ಬಿಜೆಪಿಯ ಪ್ರಯತ್ನಕ್ಕೆ ಎಷ್ಟರ ಮಟ್ಟಿಗೆ ಯಶಸ್ಸು ಸಿಗುತ್ತದೆ ಎಂಬ ಬಗ್ಗೆ ಚರ್ಚೆಗಳು ಪ್ರಾರಂಭವಾಗಿವೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಬಿಜೆಪಿಯ ಶಕ್ತಿಯನ್ನು ಹೆಚ್ಚಿಸಲು ರಾಮನಗರ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಡಾ.ಅಶ್ವತ್ಥ ನಾರಾಯಣ ಅವರು ಸಜ್ಜಾಗಿದ್ದು, ಅಯೋಧ್ಯೆ ಯಾತ್ರೆ ಇದರ ಭಾಗ ಎಂದು ಮೂಲಗಳು ಹೇಳಿವೆ.