ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ರಕ್ಷಕರೇ ಇದೀಗ ಭಕ್ಷಕರಾಗಿದ್ದಾರೆ. ರಕ್ತ ಚೆಲ್ಲಿಯಾದ್ರೂ ವಿವಿ ಜಾಗವನ್ನ ಉಳಿಸುತ್ತೇವೆ ಎಂದು ಎನ್ವೈರ್ನಮೆಂಟಲ್ ಸೊಸೈಟಿ ಆಫ್ ಇಂಡಿಯಾ ನೇತೃತ್ವದಲ್ಲಿ ಬೃಹತ್ ಜಾಗೃತಿ ಜಾಥಾ ನಡೆಸಲಾಯಿತು.
ಎನ್ವೈರ್ನಮೆಂಟಲ್ ಸೊಸೈಟಿ ಆಫ್ ಇಂಡಿಯಾ ನೇತೃತ್ವದಲ್ಲಿ ಜಾಗೃತಿ ಜಾಥಾ.. ಎನ್ವೈರ್ನಮೆಂಟಲ್ ಸೊಸೈಟಿ ಆಫ್ ಇಂಡಿಯಾ ಎನ್ನುವ ಎನ್ಜಿಒ ನೇತೃತ್ವದಲ್ಲಿ ಇಂದು ಬೆಳಗ್ಗೆ 7 ಗಂಟೆಗೆ ಬೆಂಗಳೂರು ವಿವಿ ಆವರಣದಲ್ಲಿರುವ ಜೀವ ವೈವಿಧ್ಯ ಅರಣ್ಯ ಭೂಮಿ( ಬಯೋಪಾರ್ಕ್) ಅಕ್ರಮವಾಗಿ ಬೇರೆ ಸಂಸ್ಥೆಗಳಿಗೆ ಪರಭಾರೆ ಮಾಡಿರುವುದನ್ನ ಖಂಡಿಸಿದರು. ನೂರಾರು ಪರಿಸರ ಪ್ರೇಮಿಗಳು, ನಡಿಗೆದಾರರು ಸೇರಿ ಜಾಗೃತಿ ಅಭಿಯಾನ ಕೈಗೊಂಡರು.
ಸರ್ಕಾರ ಉನ್ನತ ಶಿಕ್ಷಣ ಇಲಾಖೆ ವಿಶ್ವವಿದ್ಯಾಲಯದ ಅರಣ್ಯ ಭೂಮಿಯನ್ನು ಬೇರೆ ಸಂಸ್ಥೆಗಳಿಗೆ ನೀಡಬಾರೆಂದು ಹಲವು ಭಾರಿ ಸ್ಪಷ್ಟವಾಗಿ ನಿರ್ದೇಶಿದೆ. ವಿವಿಯ ಸಿಂಡಿಕೇಟ್ ಸಭೆಯಲ್ಲೂ ಈ ವಿಷಯ ಚರ್ಚೆಯಾಗಿ, 2017ರಲ್ಲಿ ಬೇರೆ ಸಂಸ್ಥೆಗೆ ನೀಡಬಾರದು ಎಂದು ತೀರ್ಮಾನಿಸಲಾಗಿದೆ. ಆದರೆ, ಇದೀಗ ಕುಲಪತಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಅಕ್ರಮವಾಗಿ ಅರಣ್ಯ ಕಾಯ್ದೆ, ಸರ್ಕಾರಿ ಆದೇಶ, ಸಿಂಡಿಕೇಟ್ ಸಭೆ ನಿಯಮ ಉಲ್ಲಂಘಿಸಿ ಭೂಮಿ ಮಂಜೂರು ಮಾಡಲಾಗಿದೆ.
ಈ ಸಂಬಂಧ ತನಿಖೆಯಾಗಬೇಕೆಂದು ಹಾಗೂ ಆದೇಶಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ. ಯೋಗ ವಿವಿ, ಸೆಂಟ್ರಲ್ ವಿವಿ, ನ್ಯಾಕ್ ಸಂಸ್ಥೆ, ಸಿಬಿಎಸ್‌ಸಿ ಸಂಸ್ಥೆಗಳಿಗೆ ಭೂಮಿ ನೀಡಿದೆ. ಕಳೆದ 30 ವರ್ಷಗಳಿಂದ ಸಾರ್ವಜನಿಕರು, ವಾಯುವಿಹಾರಿಗಳು, ಪರಿಸರ ತಜ್ಞರು, ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಪರಿಶ್ರಮದಿಂದ ದಟ್ಟ ಅರಣ್ಯ ಅಭಿವೃದ್ಧಿಪಡಿಸಲಾಗಿದೆ. ಇದೀಗ ಅದನ್ನ ನಾಶ ಮಾಡಲು ಬಿಡೋದಿಲ್ಲ ಎಂದು ಕಿಡಿಕಾರಿದ್ದಾರೆ.