ಬೆಂಗಳೂರು :ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ತಂಬಾಕು ಹಾಗೂ ಧೂಮಪಾನದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಜಾಗೃತಿ ಅಭಿಯಾನಕ್ಕೆ ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ವಿಶೇಷ ಆಯುಕ್ತ ಡಾ.ತ್ರಿಲೋಕ್ ಚಂದ್ರ ಚಾಲನೆ ನೀಡಿದರು.
'ತಂಬಾಕು : ನಮ್ಮ ಪರಿಸರಕ್ಕೆ ಮಾರಕ' ಎಂಬ ಘೋಷಣೆಯೊಂದಿಗೆ ತಂಬಾಕು ಸೇವನೆಯಿಂದ ಪರೋಕ್ಷ ಧೂಮಪಾನದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ವಿಶೇಷ ಪ್ರಯತ್ನ ಮಾಡಲಾಗುತ್ತಿದೆ. ಜಾಗೃತಿ ಅಭಿಯಾನದ ಅಂಗವಾಗಿ ರೇಡಿಯೋ ಟಾಕ್ ಶೋ ಮತ್ತು ಕಿರುನಾಟಕ ಪ್ರಸರಣ ಜೊತೆಗೆ ಮೀಸಲಾದ ಸಂದೇಶವನ್ನು ಆಟೋ ಪ್ರಚಾರದ ಅಭಿಯಾನ ಯೋಜಿಸಲಾಗಿದೆ. ಪ್ರಚಾರವು 3 ವಾರಗಳ ಕಾಲ ನಗರದಾದ್ಯಂತ ನಡೆಯಲಿದೆ.
ತಂಬಾಕು ಹಾನಿಗಳ ಮೇಲೆ ಕೇಂದ್ರೀಕರಿಸಿದ ಈ ಕಾರ್ಯಕ್ರಮದಲ್ಲಿ ಸಮಾಲೋಚಕರೊಂದಿಗೆ 10 ಆಟೋಗಳ ಮೂಲಕ ಸಾರ್ವಜನಿಕ ಪ್ರದೇಶ ಹಾಗೂ ಶಾಲಾ-ಕಾಲೇಜುಗಳ ಆವರಣದಲ್ಲಿ ಜಾಗೃತಿ ಮೂಡಿಸಲಾಗುತ್ತವೆ. ಆಯ್ದ ಪ್ರದೇಶಗಳಲ್ಲಿ 2 ವಾರಗಳವರೆಗೆ ಡಿ-ಅಡಿಕ್ಷನ್ ಸೇವೆಗಳ ಮಾಹಿತಿ ಒದಗಿಸಲಾತ್ತದೆ ಎಂದು ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್ ತಿಳಿಸಿದರು.