ಬಸವನಗುಡಿ ಕಡಲೆಕಾಯಿ ಪರಿಷೆ: ಜನರಲ್ಲಿ ಶುಚಿತ್ವದ ಜಾಗೃತಿ ಮೂಡಿಸುತ್ತಿವೆ ಸಂಘಟನೆಗಳು ಬೆಂಗಳೂರು: ಇತಿಹಾಸ ಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆ ನಗರದಲ್ಲಿ ನಡೆಯುತ್ತಿದೆ. ಈ ಜಾತ್ರೆಗೆ ಬರುವ ಜನರಲ್ಲಿ ಶುಚಿತ್ವ ಕಾಪಾಡುವ ಕುರಿತು ಜಾಗೃತಿ ಮೂಡಿಸಲು ಯೂತ್ ಫಾರ್ ಪರಿವರ್ತನ್ ಸೇರಿದಂತೆ ಹಲವಾರು ಸಂಘಟನೆಗಳು ಮುಂದಾಗಿವೆ.
ಈ ಕುರಿತು ಸಂಘಟನೆಯ ಸದಸ್ಯ ಮತ್ತು ಪರಿಸರ ಸ್ನೇಹಿ ಜ್ಯೂಸ್ ತಯಾರಿಸುವ ಈಟ್ ರಾಜ ಅಂಗಡಿಯ ಮಾಲೀಕ ಆನಂದ್ ರಾಜ್ ಮಾತನಾಡಿದ್ದು, "ಪರಿಸರಕ್ಕೆ ಹಾನಿಯಾಗದಂತೆ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಬಸವನಗುಡಿಯಲ್ಲಿ ಆಚರಣೆಗೊಳ್ಳುತ್ತಿರುವ ಕಡಲೆಕಾಯಿ ಪರಿಷೆ ಪ್ಲಾಸ್ಟಿಕ್ ಪರಿಷೆಯಾಗಿ ಮಾರ್ಪಾಡಾಗಿತ್ತು. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಹಲವು ಸ್ವಯಂ ಸೇವಾ ಸಂಘಟನೆಗಳೊಂದಿಗೆ ನಾವು ಕೂಡ ಕೈ ಜೋಡಿಸಿದ್ದೇವೆ" ಎಂದರು.
"ಪರಿಷೆಯಲ್ಲಿ ಪ್ಲಾಸ್ಟಿಕ್ ಚೀಲ ಬಳಕೆ ಮಾಡುವುದರಿಂದ ಹಾನಿಕಾರಕ ತ್ಯಾಜ್ಯ ಉತ್ಪತ್ತಿಯಾಗುತ್ತಿತ್ತು. ಅದನ್ನು ತಡೆಗಟ್ಟಲು ಹಲವು ವರ್ಷಗಳಿಂದ ಪ್ರಯತ್ನ ಪಡಲಾಗುತ್ತಿದೆ. ಈ ನಿಟ್ಟಿನಲ್ಲಿ ಹಲವು ಎನ್‌ಜಿಒಗಳ ವತಿಯಿಂದ ಈ ಬಾರಿ ಜಾಗೃತಿಯ ಕೆಲಸ ಮಾಡಲಾಗುತ್ತಿದೆ. ಯಾರು ಹೆಚ್ಚಾಗಿ ಪರಿಷೆಯಲ್ಲಿ ಪ್ಲಾಸ್ಟಿಕ್ ಸಂಗ್ರಹಿಸಿ ಸ್ವಚ್ಛತೆ ಕಾಪಾಡುತ್ತಾರೋ, ಅಂತಹವರಿಗೆ ಪೌರ ಕಾರ್ಮಿಕರಿಗೆ ನಾವು ಉಚಿತ ಜ್ಯೂಸ್ ನೀಡುವ ಮೂಲಕ ಉತ್ತೇಜಿಸುವ ಕೆಲಸ ಮಾಡುತ್ತಿದ್ದೇವೆ. ಪರಿಸರ ಹಾನಿ ಚಿತ್ರಗಳು ಹಾಗೂ ಘೋಷವಾಕ್ಯಗಳನ್ನು ಪ್ರದರ್ಶಿಸುತ್ತಿದ್ದೇವೆ" ಎಂದು ತಿಳಿಸಿದರು.
"ಈ ಬಾರಿ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಮಾಡಬೇಕು ಎನ್ನುವ ಉದ್ದೇಶದಿಂದ ಹಲವು ಎನ್‌ಜಿಒ ಹಾಗೂ ಸರ್ಕಾರದ ಕೈಚೀಲ ತನ್ನಿ ಎನ್ನುವ ಘೋಷವಾಕ್ಯದೊಂದಿಗೆ ಪರಿಸರ ಸಂರಕ್ಷಣೆಗೆ ಮುಂದಾಗಿವೆ. ಇಂದಿನ ದಿನಗಳಲ್ಲಿ ಪರಿಸರವನ್ನು ವಿಷಕಾರಿ ವಸ್ತುಗಳಿಂದ ಹಾನಿಗೊಳಿಸುವ ಕೆಲಸಗಳೇ ಹೆಚ್ಚಾಗುತ್ತಿವೆ. ಆದ್ದರಿಂದ ಜನರಿಗೆ ಪರಿಸರ ಪಾಮುಖ್ಯತೆ ಕುರಿತು ಅರಿವು ಮೂಡಿಸಲು ನಮ್ಮದು ಅಳಿಲು ಸೇವೆಯಾಗಿದೆ" ಎಂದು ವಿವರಿಸಿದರು.
ಕಳೆಗಟ್ಟಿದ ಕಡಲೆಕಾಯಿ ಪರಿಷೆ:ಮಂಗಳವಾರ ಕೂಡ ಪರಿಷೆ ನೋಡಲು ಸಾವಿರಾರು ಜನರು ಬರುತ್ತಿದ್ದಾರೆ. ತಮ್ಮ ಕುಟುಂಬದ ಸದಸ್ಯರು ಫ್ರೆಂಡ್ಸ್ ಜೊತೆ ಜಾತ್ರೆಗೆ ಬಂದು ಕಡಲೆಕಾಯಿ ರುಚಿ ಸವಿಯುತ್ತಿದ್ದಾರೆ. ಕಡಲೆಕಾಯಿ ಖರೀದಿ ಕೂಡ ಭರ್ಜರಿಯಾಗಿ ನಡೆಯುತ್ತಿದೆ. ಪ್ರತಿ ವರ್ಷದ ಕೊನೆಯ ಕಾರ್ತಿಕ ಮಾಸದ ಸೋಮವಾರದಿಂದ ಕಡಲೆಕಾಯಿ ಪರಿಷೆಯನ್ನು ಸುಮಾರು ವರ್ಷಗಳಿಂದಲೂ ಸಂಪ್ರದಾಯಿಕವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ದೊಡ್ಡ ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ಮಾಡುವ ಮೂಲಕ ಪರಿಷೆಗೆ ಚಾಲನೆ ನೀಡಲಾಗಿದೆ.
'ಪರಿಷೆಗೆ ಬನ್ನಿ-ಕೈಚೀಲ ತನ್ನಿ' ಎಂಬ ಆಹ್ವಾನದೊಂದಿಗೆ ಈ ಬಾರಿ ಪರಿಸರ ಸ್ನೇಹಿ ಪರಿಷೆಗೆ ಮುನ್ನುಡಿ ಬರೆಯಲಾಗಿದೆ. ಈ ಬಾರಿಯ ಕಡಲೆಕಾಯಿ ಪರಿಷೆಯನ್ನು ಪ್ಲಾಸ್ಟಿಕ್ ಮುಕ್ತವಾಗಿ ಮಾಡಲು ಕರೆ ನೀಡಲಾಗಿದೆ. ಅಲ್ಲದೇ, 65 ವರ್ಷ ಮೇಲ್ಪಟ್ಟವರಿಗೆ ದೇವಸ್ಥಾನದಲ್ಲಿ ವಿಶೇಷ ದರ್ಶನಕ್ಕೆ ಅವಕಾಶ ಕೊಡಲಾಗಿದೆ. ಕನಕಪುರ, ದೊಡ್ಡಬಳ್ಳಾಪುರ, ರಾಮನಗರ, ಮಾಗಡಿ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಮೈಸೂರು, ಭಾಗಗಳಿಂದ ವ್ಯಾಪಾರಸ್ಥರು ಬಂದಿದ್ದು, ಕರ್ನಾಟಕ ಅಲ್ಲದೇ ನೆರೆಯ ಆಂಧ್ರ, ತಮಿಳುನಾಡು ಭಾಗದಿಂದಲೂ ರೈತರು ತಾವು ಬೆಳೆದ ಕಡಲೆಕಾಯಿ ಜೊತೆ ಆಗಮಿಸಿದ್ದಾರೆ. ಒಟ್ಟಿನಲ್ಲಿ ಮೂರು ದಿನಗಳ ಕಾಲ ನಡೆಯುವ ಈ ಜನರಿಂದ ಉತ್ತಮ ರೆಸ್ಪಾನ್ಸ್ ಬರುತ್ತಿದ್ದು, ಜಾತ್ರೆಯನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಇದನ್ನೂ ಓದಿ:ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಚಾಲನೆ: ಇಂದಿನಿಂದ ಮೂರು ದಿನ ಅದ್ಧೂರಿಯಾಗಿ ನಡೆಯಲಿದೆ ಜಾತ್ರೆ