ಬೆಂಗಳೂರು: ಹಣವಂತರಿಗೆ ಆರೋಗ್ಯ ಸೇವೆ ಪಡೆದುಕೊಳ್ಳುವುದು, ಆರೋಗ್ಯ ರಕ್ಷಣೆ ಕಷ್ಟದ ಕೆಲಸವಲ್ಲ. ಬಡವರಿಗೆ ಆರೋಗ್ಯ ಭಾಗ್ಯ ಕಲ್ಪಿಸುವ ಜವಾಬ್ದಾರಿ ಸರ್ಕಾರಿ ವೈದ್ಯರ ಮೇಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಇಂದು ಸಂಜೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ವೈದ್ಯರಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು. ಸಮಾಜದಲ್ಲಿ ತಾರತಮ್ಯದ ಇರುವ ಕಾರಣಕ್ಕೆ ಉತ್ತಮ ಆರೋಗ್ಯ, ಉತ್ತಮ ಶಿಕ್ಷಣ, ಒಳ್ಳೆ ಅವಕಾಶಗಳು ಸಿಗುತ್ತಿಲ್ಲ. ಬಡವರು ಖಾಸಗಿ ಆಸ್ಪತ್ರೆಗೆ ಹೋಗುವ ಅನಿವಾರ್ಯತೆ ಬಾರದ ರೀತಿಯಲ್ಲಿ ಸರ್ಕಾರಿ ವೈದ್ಯರು ವೃತ್ತಿಪರತೆ, ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಹಳ್ಳಿಗಳಿಂದ, ಬಡತನ, ಶೋಷಿತ, ಹಿಂದುಳಿದ ಕೌಟುಂಬಿಕ ಹಿನ್ನೆಲೆಯಿಂದ ಬರುತ್ತಿರುವ ವೈದ್ಯರ ಪ್ರಮಾಣವೇ ಹೆಚ್ಚಾಗಿದೆ. ಇವರು ಗ್ರಾಮೀಣ ಭಾಗಗಳಲ್ಲಿ ಕೆಲಸ ಮಾಡಲು ಹೆಚ್ಚು ಉತ್ಸಾಹದಿಂದ ಸ್ವಯಂಪ್ರೇರಿತವಾಗಿ ಮುಂದೆ ಬರಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬರುವ ರೋಗಿಗಳು ತಮ್ಮದೇ ಹಿನ್ನೆಲೆಯವರು ಎನ್ನುವುದನ್ನು ಮರೆಯಬಾರದು.
ಅಗತ್ಯ ಸವಲತ್ತುಗಳನ್ನು ತಕ್ಕ ಮಟ್ಟಿಗೆ ದೊರಕಿಸಿಕೊಟ್ಟರೂ ಗ್ರಾಮೀಣ ಭಾಗದಲ್ಲಿ ವೈದ್ಯರು ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಿರುವುದು ಬೇಸರದ ಸಂಗತಿ. ಸರ್ವರಿಗೂ ಉತ್ತಮ ಆರೋಗ್ಯ, ಶಿಕ್ಷಣ ಕೊಡುವುದು ಸರ್ಕಾರದ ಕರ್ತವ್ಯ. ಜನರ ಈ ನಿರೀಕ್ಷೆಗೆ ತಕ್ಕಂತೆ ಸರ್ಕಾರಿ ವೈದ್ಯರು, ಖಾಸಗಿ ವೈದ್ಯರು ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಆಗಿದ್ದ ಬಿಧಾನ್ ಚಂದ್ರ ರಾಯ್ ಅವರು ಸಿಎಂ ಆಗಿದ್ದಾಗಲೂ ವೈದ್ಯ ವೃತ್ತಿ ಮುಂದುವರೆಸಿದ್ದರು. ಜನರಿಗೆ ಆರೋಗ್ಯ ಸೇವೆ ನೀಡುತ್ತಿದ್ದರು. ಹೀಗಾಗಿ ಭಾರತ ರತ್ನ ಎನಿಸಿಕೊಂಡರು. ಪ್ರತಿಯೊಬ್ಬ ವೈದ್ಯರಿಗೂ ಬಿ.ಸಿ.ರಾಯ್ ಮಾದರಿ ಆಗಲು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.
ಎಲ್ಲರೂ ಅಂಬೇಡ್ಕರ್ ಆಗಲು, ಬುದ್ದ ಆಗಲು, ಗಾಂಧಿ ಆಗಲು ಸಾಧ್ಯವಿಲ್ಲ. ಆದರೆ ಅವರ ದಾರಿಯಲ್ಲಿ ನಡೆಯಲು ಎಲ್ಲರಿಗೂ ಸಾಧ್ಯವಿದೆ. ವೈದ್ಯ ಸಮುದಾಯ ಡಾಕ್ಟರ್ ಬಿಧಾನ್ ಚಂದ್ರ ರಾಯ್ ಅವರು ಹಾಕಿಕೊಟ್ಟ ಮಾದರಿ ದಾರಿಯಲ್ಲಿ ನಡೆಯಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಸೇವಾ ಮನೋಭಾವ, ಅತಃಕರಣದ ವೈದ್ಯರನ್ನ ಸಮಾಜ ಸದಾ ಸ್ಮರಿಸುತ್ತದೆ : ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ವೈದ್ಯಕೀಯ ಕ್ಷೇತ್ರ ಸೇವಾ ಮನೋಭಾವದ್ದು ಎಂಬ ಮೂಲ ಉದ್ದೇಶವನ್ನು ನಾವು ಮರೆಯಬಾರದು. ಮಾನವೀಯತೆ ಅತಃಕರಣದಿಂದ ವೈದ್ಯರು ಬಡವರಿಗೆ ಚಿಕಿತ್ಸೆ ನೀಡಲು ಮುಂದಾಗಬೇಕು. ಸೇವಾ ಮನೋಭಾವ ಇದ್ದಾಗ ಮಾತ್ರ ಒಬ್ಬ ಡಾಕ್ಟರ್ ಒಳ್ಳೆಯ ಡಾಕ್ಟರ್ ಎನಿಸಿಕೊಂಡು ಜನರಿಗೆ ಹತ್ತಿರವಾಗಲು ಸಾಧ್ಯ. ಡಾ. ಬಿಧಾನ್ ಚಂದ್ರ ರಾಯ್ ಅವರನ್ನೇ ಎಲ್ಲ ವೈದ್ಯರು ಪ್ರೇರಣೆಯಾಗಿ ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.
ಡಾ. ಬಿ.ಸಿ ರಾಯ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ನಾಯಕರಲ್ಲಿ ಒಬ್ಬರಾಗಿ ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದವರು. ಬಿ.ಸಿ ರಾಯ್ ಅವರು ರಾಜಕಾರಣದಲ್ಲಿ ಉನ್ನತ ಸ್ಥಾನ ಅಲಂಕರಿಸಿದರೂ, ತಮ್ಮ ವೈದ್ಯ ವೃತ್ತಿಯನ್ನ ಮರೆತಿರಲಿಲ್ಲ. ಸಿಎಂ ಆಗಿದ್ದಾಗಲೂ, ಸಂಜೆ 1 ಗಂಟೆ ಕೊಳಗೆರಿ ಜನರಿಗೆ ಚಿಕಿತ್ಸೆ ನೀಡುತ್ತಿದ್ದರು. ಅವರ ಸ್ಮರಣಾರ್ಥವಾಗಿಯೇ ನಮ್ಮ ದೇಶದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚಾರಣೆ ಆಚರಣೆಗೆ ಬಂದಿದೆ ಎಂದು ಅಭಿಮತ ವ್ಯಕ್ತಪಡಿಸಿದರು.
ಆರೋಗ್ಯ ಇಲಾಖೆಯಲ್ಲಿ ಅಂಗಾಂಗ ತಜ್ಞ ವೈದ್ಯರ ಪ್ರಾವೀಣ್ಯತೆ ಬಡಜನರಿಗೂ ಸಿಗುವಂತಾಗಬೇಕು. ಈ ಬಗ್ಗೆ ಸರ್ಕಾರ ಕಾರ್ಯಕ್ರಮಗಳನ್ನ ಹಾಕಿಕೊಳ್ಳಲಿದೆ. ಅಲ್ಲದೇ ಸರ್ಕಾರಿ ಕುಂದು ಕೊರತೆಗಳನ್ನ ನಿವಾರಿಸಲು ಸರ್ಕಾರ ಪ್ರಮಾಣಿಕ ಪ್ರಯತ್ನ ಮಾಡಲಿದೆ ಎಂದು ಗುಂಡೂರಾವ್ ಇದೇ ವೇಳೆ ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರಿಗೆ ಆರೋಗ್ಯ ಇಲಾಖೆಯ ಮೇಲೆ ವಿಶೇಷ ಕಾಳಜಿ ಇದೆ. ಬಡವರ ಆರೋಗ್ಯ ರಕ್ಷಣೆಗೆ ಸಿದ್ದರಾಮಯ್ಯ ಅವರು ಬದ್ಧತೆ ಹೊಂದಿರುವವರು. ಆರೋಗ್ಯ, ಅಹಾರ, ಶಿಕ್ಷಣದ ವಿಚಾರದಲ್ಲಿ ಬಡವರು ವಂಚಿತರಾಗಬಾರದು ಎಂಬ ಮನೋಭಾವ ಸಿದ್ದರಾಮಯ್ಯ ಅವರು ಹೊಂದಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಉತ್ತಮ ಆರೋಗ್ಯ ಸೇವೆ ದೊರೆಯಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾಧನೆ ಮಾಡಿದ ವೈದ್ಯರನ್ನು ಸಿಎಂ ಸಿದ್ದರಾಮಯ್ಯ ಅವರು ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಶಾಸಕ ರಿಜ್ವಾನ್ ಹರ್ಷದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅನೀಲ್ ಕುಮಾರ್, ಆರೋಗ್ಯ ಆಯುಕ್ತ ರಂದೀಪ್, ಎನ್.ಎಚ್.ಎಮ್ ಎಂ.ಡಿ ನವೀನ್ ಭಟ್ ಅವರು ಉಪಸ್ಥಿತರಿದ್ದರು.
ಇದನ್ನೂಓದಿ:ಬಿಎಸ್ವೈಗೆ ಹೈಕಮಾಂಡ್ ಬುಲಾವ್: ನಾಳೆ ದೆಹಲಿಗೆ ಯಡಿಯೂರಪ್ಪ, ವಿಪಕ್ಷ ನಾಯಕ ಹೆಸರು ಘೋಷಣೆ ಸಾಧ್ಯತೆ