ಬೆಂಗಳೂರು: ರಾಜ್ಯದಲ್ಲಿ ಸಕ್ಕರೆ ಉದ್ಯಮ ನಿರೀಕ್ಷೆಗೂ ಮೀರಿ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಸಕ್ಕರೆ ಕಾರ್ಖಾನೆಗಳೂ ಸಹ ಒಳ್ಳೆಯ ಲಾಭದಲ್ಲಿವೆ. ಆದರೆ ಅವುಗಳಿಂದ ರೈತರಿಗೆ ಅಥವಾ ಸರ್ಕಾರಕ್ಕೆ ಏನೂ ಲಾಭವಾಗುತ್ತಿಲ್ಲ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಮಾತನಾಡಿದ್ದು ಸಕ್ಕರೆ ಉದ್ಯಮದ ಕರಾಳ ಮುಖವನ್ನು ತೋರಿಸಿದೆ ಎಂದು ರಾಜ್ಯಸಭಾ ಸಂಸದ ಮತ್ತು ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಕಡಾಡಿ, ಬುಧವಾರ ಬೆಳಗಾವಿಯಲ್ಲಿ ಸಚಿವರು ಹೇಳಿದ ಪ್ರಕಾರ, ಕಬ್ಬು ಬೆಳೆಗಾರರಿಗೆ ರಾಜ್ಯದಲ್ಲಿ ಎಲ್ಲ ಕಾರ್ಖಾನೆಗಳು 400 ಕೋಟಿ ರೂ. ಬಾಕಿ ಕೊಡಬೇಕಾಗಿದೆ. ಇದು ಬೆಳೆಗಾರ ರೈತರ ಶೋಷಣೆ. ರೈತ ಕಾರ್ಖಾನೆಗೆ ಕಬ್ಬು ನೀಡುವಾಗ ಕಾರ್ಖಾನೆಗಳು ತೂಕದಲ್ಲಿ ಮೋಸ ಮಾಡುತ್ತಿವೆ. ಸರಿಯಾದ ಲೆಕ್ಕಪತ್ರವಿಲ್ಲದೇ ಸಕ್ಕರೆ ಮತ್ತು ಅದರ ಉಪ ಉತ್ಪಾದನೆಗಳಲ್ಲಿ ಬಂದ ಲಾಭದಲ್ಲಿ ರೈತರಿಗೆ ಪಾಲು ಕೂಡ ಸಿಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾರ್ಖಾನೆ ಮಾಲೀಕರುಗಳನ್ನು ಕೇವಲ ಕಾರ್ಖಾನೆ ಮಾಲೀಕರಾಗಿ ನೋಡಬೇಕೇ ಹೊರತು, ಯಾವುದೇ ಪಕ್ಷ ಅಥವಾ ಯಾವುದೇ ಪಕ್ಷದ ಸರ್ಕಾರ ಅವರ ಬೆನ್ನಿಗೆ ನಿಲ್ಲದೇ ನಾಡಿಗೆ ಅನ್ನ ನೀಡುವ ರೈತಾಪಿ ವರ್ಗದ ಪರವಾಗಿ ಬೆಂಬಲಿಸಬೇಕು. ತೂಕದ ಯಂತ್ರಗಳಲ್ಲಿನ ಮೋಸ ತಡೆಯುವ ದೃಷ್ಠಿಯಿಂದ ಸರ್ಕಾರ ಕಾರ್ಖಾನೆ ಎದುರಿಗೆ ತೂಕದ ಯಂತ್ರದ ಅಳವಡಿಕೆ ಮಾಡಲಾಗುತ್ತದೆ ಎಂದು ಹೇಳಿದೆ. ಆದರೆ ಅದರ ನಿರ್ವಹಣೆಯನ್ನು ರೈತರಿಗೆ ನೀಡಬೇಕೆಂದು ಆಗ್ರಹಿಸಿದ್ದಾರೆ.