ಬೆಂಗಳೂರು:ಹೊಸ ಮನೆ ಹಾಗೂ ಹೊಸ ಬಾಡಿಗೆದಾರರಿಗೆ ಸರಾಸರಿ ವಿದ್ಯುತ್ ಬಳಕೆ 53 ಯೂನಿಟ್ ಅಂತ ಪರಿಗಣಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು. ವಿಧಾನಸೌಧದಲ್ಲಿ ಇಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಹೊಸ ಮನೆ ಮತ್ತು ಹೊಸ ಮನೆ ಬಾಡಿಗೆದಾರರಿಗೆ ಉಚಿತ ವಿದ್ಯುತ್ ನೀಡುವ ಬಗ್ಗೆ ಚರ್ಚೆಯಾಗಿದೆ. ಈ ಸಂಬಂಧ ಸಿಎಂ ಜೊತೆ ಚರ್ಚೆ ನಡೆಸಿದ್ದೇವೆ. ಯಾರೇ ಹೊಸದಾಗಿ ಮನೆ ನಿರ್ಮಿಸಿದ್ದರೆ ಅಥವಾ ಹೊಸ ಬಾಡಿಗೆದಾರರಲ್ಲಿ ಒಂದು ವರ್ಷದ ಸರಾಸರಿ ವಿದ್ಯುತ್ ಬಳಕೆಯ ದಾಖಲೆ ಇರುವುದಿಲ್ಲ. ಅವರನ್ನು ಯಾವ ರೀತಿ ಪರಿಗಣಿಸಬೇಕು ಎಂಬ ಬಗ್ಗೆ ಚರ್ಚಿಸಿದ್ದೇವೆ ಎಂದರು.
ಅವರಿಗೂ ಉಚಿತ ವಿದ್ಯುತ್ ಅನ್ವಯವಾಗಲಿದೆ. ದೇಶದ ಸರಾಸರಿ ಗ್ರಾಹಕರ ವಿದ್ಯುತ್ ಬಳಕೆ 53 ಯೂನಿಟ್ ಆಗಿದೆ. ಹೊಸ ಮನೆ ಹಾಗೂ ಹೊಸ ಬಾಡಿಗೆದಾರರಿಗೆ ಈ 53 ಯೂನಿಟ್ ಸರಾಸರಿಯನ್ನು ಪರಿಗಣಿಸಲಾಗುತ್ತದೆ. ಅದರ ಮೇಲೆ 10% ಸೇರಿಸಲಾಗುತ್ತದೆ. ಅದರಂತೆ ಹೊಸ ಮನೆ ಮತ್ತು ಹೊಸದಾಗಿ ಬಾಡಿಗೆಗೆ ಬಂದವರಿಗೆ 58 ಯೂನಿಟ್ ವರೆಗೂ ವಿದ್ಯುತ್ ಉಚಿತ ಸಿಗಲಿದೆ. ಹೊಸ ಮನೆಯವರಿಗೆ ಕೂಡ ಇದೇ ಯೂನಿಟ್ ಅನ್ವಯ ಆಗಲಿದೆ. ಒಂದು ವರ್ಷದವರೆಗೂ ಲೆಕ್ಕ ಸಿಗದವರಿಗೆ ಈ ಲೆಕ್ಕ ಅನ್ವಯ ಆಗಲಿದೆ ಎಂದು ಇದೇ ವೇಳೆ ಸಚಿವರು ಸ್ಪಷ್ಟಪಡಿಸಿದರು.
200 ಯೂನಿಟ್ ಉಚಿತ ವಿದ್ಯುತ್ಗೆ ಷರತ್ತು ವಿಚಾರವಾಗಿ ಪ್ರತಿಕ್ರಿಯಿಸಿ, ನಿನ್ನೆಯೂ ಸಿಎಂ ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯವರು ನಮ್ಮ ಉಚಿತ ಕೊಡುಗೆ ವಿರುದ್ಧ ಇದ್ದಾರೆ. ಅವರಿಗೆ ಪ್ರಶ್ನೆ ಮಾಡುವ ಹಕ್ಕಿಲ್ಲ. 2022ರ ಏಪ್ರಿಲ್ ತಿಂಗಳಿಂದ 2023ರ ಮಾರ್ಚ್ ತಿಂಗಳ 12 ತಿಂಗಳ ಅವಧಿ ಲೆಕ್ಕಾಚಾರ ಮಾಡಲಿದ್ದೇವೆ. ಹೊಸ ಮನೆಯವರಿಗೆ ಹಂತ ಹಂತವಾಗಿ 200 ಯೂನಿಟ್ ಸಿಗಲಿದೆ ಎಂದರು.