ಬೆಂಗಳೂರು:ನಮ್ಮ ಹಳ್ಳಿಯ ಸೊಗಡನ್ನು ಸವಿಯಬೇಕಾದರೆ ಪ್ರತಿಯೊಬ್ಬರೂ ಅವರೆ ಬೇಳೆ ಮೇಳಕ್ಕೆ ಬರಲೇಬೇಕು. ಅವರೆ ಕಾಯಿಯಲ್ಲಿ ತರಹೇವಾರಿ ತಿನಿಸುಗಳಿವೆ ಎಂಬುದನ್ನು ತೋರಿಸಿಕೊಟ್ಟಿರುವ ಕೀರ್ತಿ ವಾಸವಿ ಕಾಂಡಿಮೇಂಟ್ಸ್ಗೆ ಸಲ್ಲಬೇಕು ಎಂದು ವಿಧಾನ ಪರಿಷತ್ ಸದಸ್ಯ ಟಿ.ಶರವಣ ಹೇಳಿದರು.
ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜನವರಿ 9ರವರೆಗೆ ಆಯೋಜಿಸಿರುವ ಅವರೆ ಬೇಳೆ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೈತರು ಬೆಳೆದಿರುವ ಅವರೆ ಬೇಳೆಯಿಂದ ತಂದು ಇಲ್ಲಿ ಕಡಿಮೆ ಬೆಲೆಯಲ್ಲಿ ಶುಚಿ ರುಚಿಯಿಂದ ವಿವಿಧ ತಿಂಡಿಗಳನ್ನು ಮಾಡಿ ಜನರಿಗೆ ನೀಡುತ್ತಿರುವುದು ಶ್ಲಾಘನೀಯ ಕೆಲಸ ಎಂದು ಸಂತಸ ವ್ಯಕ್ತಪಡಿಸಿದರು.
ಅವರೆ ಬೇಳೆ ಮೇಳಕ್ಕೆ ವಿಧಾನ ಪರಿಷತ್ ಸದಸ್ಯ ಟಿ.ಶರವಣ ಚಾಲನೆ ನೀಡಿದರು. ಬೇಲಿಮಠದ ಶಿವರುದ್ರ ಸ್ವಾಮೀಜಿ ಮಾತನಾಡಿ, ಅವರೆ ಮೇಳದ ಸೊಬಗು ಎಲ್ಲರನ್ನೂ ಸೆಳೆಯುತ್ತಿದೆ. ನಗರದ ಒತ್ತಡದಲ್ಲೇ ನಾಲಿಗೆ ರುಚಿ ಕಳೆದುಕೊಂಡ ಜನರು ಅವರೆ ಮೇಳಕ್ಕೆ ಬಂದು ಹಳ್ಳಿಯ ಸೊಗಡಿನ ಸವಿ ಸವಿಯಬಹುದು ಎಂದು ತಿಳಿಸಿದರು.
ವಾಸವಿ ಕಾಂಡಿಮೆಂಟ್ಸ್‌ನ ಕೆ.ಎಸ್.ಸ್ವಾತಿ ಮಾತನಾಡಿ, ಕಳೆದ ಬಾರಿ ಅವರೆ ಐಸ್ ಕ್ರೀಂ ಫೇಮಸ್ ಆಗಿತ್ತು. ಈ ಬಾರಿ ಹೊಸದಾಗಿ ಅವರೆ ಬೇಳೆಯಿಂದ ಮಾಡಿರುವ ಕ್ರಿಸ್ಪ್ ಬೀನ್ಸ್ ಪರಿಚಯ ಮಾಡಿಕೊಡಲಾಗಿದೆ ಎಂದರು.
ಕಳೆದ ವರ್ಷ ನಾವು ನಿರೀಕ್ಷಿಸಿರಲಾರದಷ್ಟು ಜನ ಮೇಳಕ್ಕೆ ಭೇಟಿ ನೀಡಿದ್ದರು. ಈ ಬಾರಿ ಮೆಟ್ರೋ ನಿಲ್ದಾಣದಿಂದ ಮೇಳದ ಸ್ಥಳಕ್ಕೆ ಸುಲಭವಾಗಿ ತಲುಪಲು ಸಹಕಾರಿಯಾಗಿದೆ. ಈ ವರ್ಷ ಮೇಳದಲ್ಲಿ ಖಾದ್ಯಗಳನ್ನು ಸವಿಯದೆ ಯಾರೂ ಮನೆಗೆ ಹೋಗದಂತೆ ಉತ್ತಮ ತಯಾರಿ ನೆಡೆಸಿದ್ದೇವೆ ಎಂದು ತಿಳಿಸಿದರು. ನಟಿ ತಾರಾ, ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
24ನೇ ಆವೃತಿಯ ಅವರೆ ಮೇಳ:ವರ್ಷದ ಆರಂಭದಲ್ಲಿ ಅವರೆ ಬೇಳೆ ವಿವಿಧ ಖಾದ್ಯಗಳನ್ನು ಸವಿಯುವ ಅವಕಾಶ ನಾಗರಿಕರಿಗೆ ಲಭಿಸುತ್ತಿದೆ. ಅವರೆ ದೋಸೆ, ಪಾಯಸ, ಮಂಚೂರಿಯನ್, ವಡೆ, ಕೋಡುಬಳೆ, ಐಸ್‌ಕ್ರೀಂ, ಹಲ್ವಾ ಸೇರಿದಂತೆ ನೂರಕ್ಕೂ ಹೆಚ್ಚು ತಿನಿಸುಗಳು ಈ ಮೇಳದಲ್ಲಿ ಲಭ್ಯವಿದೆ. ಈ ವರ್ಷ ಸುಮಾರು 80 ಸ್ಟಾಲ್‌ಗಳಿವೆ. ದೋಸೆಯಂತಹ ಹೆಚ್ಚು ಬೇಡಿಕೆಯಿರುವ ತಿನಿಸುಗಳಿಗೆ ಸುಮಾರು ಐದು ಕೌಂಟರ್‌ಗಳು ಇವೆ. ಹಿರಿಯ ನಾಗರಿಕರಿಗೆ ವಿಶೇಷ ಕೌಂಟರ್ ಜತೆಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ.
ಇದನ್ನೂಓದಿ:ಇಂದಿರಾ ಕ್ಯಾಂಟೀನ್, ಶಾಲಾ ಬಿಸಿಯೂಟದಲ್ಲಿ ಸಿರಿಧಾನ್ಯ ಬಳಕೆಗೆ ಶೀಘ್ರ ಕ್ರಮ: ಸಿಎಂ