ಬೆಂಗಳೂರು:ಕೊರೊನಾ ಪ್ರೇರಿತ ಲಾಕ್ಡೌನ್ನಿಂದ ಆಟೋಮೊಬೈಲ್ ಕ್ಷೇತ್ರಕ್ಕೆ ದೊಡ್ಡ ಪೆಟ್ಟು ಬಿದ್ದಿತ್ತು. ಆರ್ಥಿಕ ಹಿಂಜರಿತದಿಂದ ಕಂಗೆಟ್ಟಿದ್ದ ಈ ಉದ್ಯಮ, ಇದೀಗ ನಿಧಾನಕ್ಕೆ ಚೇತರಿಕೆ ಕಾಣುವತ್ತ ಹೆಜ್ಜೆ ಹಾಕುತ್ತಿದೆ. ದ್ವಿಚಕ್ರ ವಾಹನ, ಕಾರು, ಟ್ರ್ಯಾಕ್ಟರ್ ಮಾರಾಟ ಇದೀಗ ಉತ್ತಮವಾಗಿ ನಡೆಯುತ್ತಿದೆ. ಹಾಗೂ ಹೊರಗಡೆ ಬಿಡಿ ಭಾಗಗಳ ಮಾರಾಟ ಸಹಜ ಸ್ಥಿತಿಯತ್ತ ನಡೆಯುತ್ತಿದೆ.
ಕೊರೊನಾ ಭೀತಿಯಿಂದ ಜನರು, ಸಾರ್ವಜನಿಕ ಸಾರಿಗೆಯನ್ನು ಕಡಿಮೆ ಪ್ರಮಾಣದಲ್ಲಿ ಬಳಸುತ್ತಿದ್ದಾರೆ. ತಮ್ಮ ಪ್ರಯಾಣಕ್ಕೆ ಸ್ವಂತ ದ್ವಿಚಕ್ರ ವಾಹನ ಅಥವಾ ಕಾರುಗಳ ಖರೀದಿಗೆ ಜನರು ಮುಂದಾಗಿದ್ದಾರೆ. ಇದರಿಂದ ವಾಹನಗಳ ಬಿಡಿ ಭಾಗಗಳ ಉತ್ಪನ್ನ ಹಾಗೂ ಮಾರಾಟ ಹೆಚ್ಚಾಗಿದೆ. ಇದರ ಜೊತೆಗೆ ವಾಹನ ಉತ್ಪಾದನೆಯ ಕಂಪನಿಗಳು ಹೊಸ ಮಾದರಿಯ ವಾಹನಗಳು ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಇದಕ್ಕೆ ಪೂರಕವಾಗಿ ವಾಹನಗಳ ಖರೀದಿಯಲ್ಲೂ ಏರಿಕೆ ಕಂಡಿದೆ.
ಚೇತರಿಕೆ ಹಾದಿಯತ್ತ ಆಟೋ ಮೊಬೈಲ್ ಕ್ಷೇತ್ರ ಇನ್ನು ಆಟೋಮೊಬೈಲ್ ವಲಯಕ್ಕೆ ಸಂಬಂಧಿಸಿದ ಮಷಿನ್ ಟೂಲ್ಸ್ಗಳ ಉತ್ಪನ್ನ ಪ್ರಮಾಣ ಕೂಡ ಹೆಚ್ಚಾಗಿದ್ದು, ಮಾರ್ಚ್ ತಿಂಗಳಿಂದ ಹಾಗೇ ಉಳಿದಿದ್ದ ಬಿಡಿ ಭಾಗಗಳು, ಇದೀಗ ಮಾರಾಟವಾಗಿವೆ. ಹಾಗೂ ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಂದ ಬೇಡಿಕೆ ಬರುತ್ತಿದೆ. ಇದರ ಜೊತೆಗೆ ಸರ್ಕಾರದ ನಿಯಮಗಳನ್ನ ಪಾಲಿಸಿ, ಹಲವಾರು ಆಟೋಮೊಬೈಲ್ ಕೈಗಾರಿಕೆಗಳು ಕೆಲಸ ಮಾಡಲು ಶುರು ಮಾಡಿವೆ.
ಇನ್ನು ಮಾರುತಿ ಸುಜುಕಿ ಹಾಗೂ ಟೊಯೊಟಾ ಸೇರಿದಂತೆ ಇನ್ನಿತರ ಆಟೋಮೊಬೈಲ್ ದಿಗ್ಗಜರು, ತಮ್ಮ ಉತ್ಪನ್ನಗಳ ರಫ್ತಿಗೆ ಯೋಜನೆಗಳನ್ನ ರೂಪಿಸುತ್ತಿದ್ದಾರೆ. ಇದರ ಜೊತೆಗೆ ತ್ರೈಮಾಸಿಕ ಫಲಿತಾಂಶಗಳಲ್ಲಿ ಆಟೋಮೊಬೈಲ್ ವಲಯದಲ್ಲಿ ಹೆಚ್ಚಿನ ಚೇತರಿಕೆ ಕಂಡು ಬಂದಿದೆ.
ಪ್ರಮುಖವಾಗಿ ಚೀನಾ ಹಾಗೂ ಭಾರತ ನಡುವಿನ ಬಾಂಧವ್ಯ ಹದಗೆಟ್ಟಿರುವ ಹಿನ್ನೆಲೆ, ಆಮದು ಹಾಗೂ ರಫ್ತು ಮೇಲೆ ಕಡಿವಾಣ ಹೇರಲಾಗಿದೆ. ಇದರಿಂದ ಆಟೋಮೊಬೈಲ್ ಕ್ಷೇತ್ರಕ್ಕೆ ಅದರಲ್ಲೂ ಬಿಡಿ ಭಾಗಗಳ ಪೂರೈಕೆ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಇದರ ಹೊರತಾಗಿಯೂ ಇದೀಗ ಆಟೋಮೊಬೈಲ್ ಕ್ಷೇತ್ರ ನಿಧಾನಕ್ಕೆ ಚೇತರಿಕೆ ಕಾಣುತ್ತಿರುವುದಂತೂ ಸ್ಪಷ್ಟ.