ಬೆಂಗಳೂರು: ಆಟೋ ಚಾಲಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯ ಟಿಂಬರ್ ಲೇಔಟ್ನಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಅರುಣ್ (24) ಕೊಲೆಯಾದ ಆಟೋ ಚಾಲಕ ಎಂದು ಗುರುತಿಸಲಾಗಿದೆ. ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಕೆಲಸ ಮುಗಿಸಿಕೊಂಡು ಬಂದಿದ್ದ ಅರುಣ್ ಮನೆ ಬಳಿ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ಏಕಾಏಕಿ ದುಷ್ಕರ್ಮಿಗಳ ಗುಂಪು ಬಂದು ಮನಸೋಯಿಚ್ಛೆ ಮಾರಕಾಸ್ತ್ರ ಬೀಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಸುಮಾರು ಏಳೆಂಟು ಮಂದಿ ಈ ಕೃತ್ಯವೆಸಗಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಘಟನೆ ಸಂಬಂಧ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿರುವ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಹಿಂದೆ ಅರುಣ್ ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಹಳೆ ದ್ವೇಷದಿಂದ ಆರೋಪಿಗಳು ಹತ್ಯೆ ಮಾಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ತನಿಖೆ ಕೈಗೊಂಡಿದ್ದಾರೆ. ಅರುಣ್ಗೆ ತಾನು ಪ್ರೀತಿಸುತ್ತಿದ್ದ ಯುವತಿಯೊಂದಿಗೆ ಮುಂದಿನ ತಿಂಗಳು ಮದುವೆ ನಿಶ್ಚಿತವಾಗಿತ್ತು ಎನ್ನಲಾಗಿದೆ.
ಹಿಂದಿನ ಘಟನೆಗಳು, ಯುವಕನ ಬರ್ಬರ ಹತ್ಯೆ:ಹಳೇ ವೈಷಮ್ಯ ಹಿನ್ನೆಲೆ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಯುವಕನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿ ಇತ್ತೀಚೆಗೆ ನಡೆದಿತ್ತು. ಶಾನೂರು ಪೂಜಾರಿ (27) ಕೊಲೆಯಾದ ಯುವಕ ಎಂದು ಗುರುತಿಸಲಾಗಿತ್ತು.
ನಡು ರಸ್ತೆಯಲ್ಲೇ ವ್ಯಕ್ತಿಯ ಕೊಲೆ: ವ್ಯಕ್ತಿಯೋರ್ವನನ್ನು ನಡು ರಸ್ತೆಯಲ್ಲೇ ಕೊಲೆ ಮಾಡಿರುವ ಘಟನೆ ಧಾರವಾಡದ ಮರಾಠ ಕಾಲೋನಿಯಲ್ಲಿ ಕೆಲದಿನಗಳ ಹಿಂದೆ ನಡೆದಿತ್ತು. ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ನಿಂಗಪ್ಪ ಹಡಪದ (60) ಎಂಬುವವರನ್ನು ಹತ್ಯೆಗೈಯಲಾಗಿತ್ತು. ಆಸ್ತಿ ವಿಚಾರಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿತ್ತು. ನಿಂಗಪ್ಪ ಅವರ ಮೇಲೆ ಮೂವರು ಆರೋಪಿಗಳು ಸೇರಿಕೊಂಡು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದರು. ಕೊಲೆ ಮಾಡುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿತ್ತು.
ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ವ್ಯಕ್ತಿ ಕೊಲೆ:ಕಳೆದ ವಾರಶಿವಮೊಗ್ಗದಲ್ಲಿ ಆಸ್ತಿ ವಿಚಾರಕ್ಕಾಗಿ ಬೈಕ್ನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲಾಗಿತ್ತು. ಆರೋಪಿಗಳು ಮೃತ ವ್ಯಕ್ತಿಯ ಸಂಬಂಧಿಗಳಾಗಿದ್ದಾರೆ. ಕೋರ್ಟ್ನಲ್ಲಿ ಜಮೀನಿಗೆ ಸಂಬಂಧಪಟ್ಟ ವಿಚಾರಣೆ ನಡೆಯುತ್ತಿದ್ದು, ಪ್ರಕರಣದ ತೀರ್ಪು ಮೃತ ವ್ಯಕ್ತಿಯ ಪರವಾಗಿತ್ತು. ಹೀಗಾಗಿ ವ್ಯಕ್ತಿಯನ್ನು ಹಿಂಬಾಲಿಸಿಕೊಂಡು ಬಂದು ಕೃತ್ಯ ಎಸಗಿದ್ದರು.
ಇದನ್ನೂ ಓದಿ:ಎಂಎಲ್ಸಿ ಸಿ ಪಿ ಯೋಗೇಶ್ವರ್ ಬಾವ ಶವವಾಗಿ ಪತ್ತೆ: ಕೊಲೆ ಶಂಕೆ