ಬೆಂಗಳೂರು:ಕನ್ನಡ ಮಾತನಾಡಿಲ್ಲ ಎಂದು ಉತ್ತರ ಭಾರತ ಮೂಲದ ಮಹಿಳಾ ಪ್ರಯಾಣಿಕರ ಮೇಲೆ ಆಟೋ ಚಾಲಕ ಅಸಮಾಧಾನಗೊಂಡ ಘಟನೆ ನಡೆದಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ಇಂದಿರಾನಗರದಲ್ಲಿ ಘಟನೆ ನಡೆದಿದೆ ಎನ್ನಲಾಗುತ್ತಿದೆ.
ಆಟೋದಲ್ಲಿದ್ದ ಮಹಿಳೆ, ಹಿಂದಿ ಭಾಷೆಯಲ್ಲಿ ಮಾತನಾಡಿ ಎಂದು ಚಾಲಕನಿಗೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಆತ ಕನ್ನಡದಲ್ಲಿಯೇ ಮಾತನಾಡುತ್ತೇನೆ. ಸ್ಥಳೀಯ ಭಾಷೆ ಬಿಟ್ಟು ನಾನು ಯಾಕೆ ಹಿಂದಿಯಲ್ಲಿ ಮಾತನಾಡಲಿ ಎಂದು ಪ್ರಶ್ನಿಸಿದ್ದಾರೆ.
ಆಟೋ ಚಾಲಕನ ಮಾತಿಗೆ ಪ್ರತಿರೋಧ ವ್ಯಕ್ತಪಡಿಸಿದ ಮಹಿಳೆ, ನಮಗೆ ಕನ್ನಡ ಬರುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಚಾಲಕ, ಇದು ಕರ್ನಾಟಕ. ನಮ್ಮ ಭೂಮಿ. ನೀವು ಕನ್ನಡ ಮಾತನಾಡಿ. ನಾನು ಯಾಕೆ ಹಿಂದಿ ಮಾತನಾಡಬೇಕು ಎಂದು ತಿಳಿಸಿದ್ದಾರೆ. ಇದರಿಂದ ಕಕ್ಕಾಬಿಕ್ಕಿಯಾದ ಮಹಿಳೆ ಆಟೋ ಇಳಿದು ಹೋಗಿದ್ದಾರೆ.
ಮಹಿಳೆ ನಡೆದ ಘಟನೆಯನ್ನು ಮೊಬೈಲ್ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಯು ಎಲ್ಲಿ, ಯಾವಾಗ ನಡೆದಿದೆ ಎಂಬುದರ ಬಗ್ಗೆ ಖಚಿತತೆ ಇಲ್ಲ.
ಇದನ್ನೂ ಓದಿ:ರ‍್ಯಾಪಿಡೋ ಕ್ಯಾಪ್ಟನ್ ಮೇಲೆ ಆಟೋ ಚಾಲಕನ ದರ್ಪ: ಪ್ರಕರಣ ದಾಖಲು