ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಪೋಷಕರ ಮಹತ್ವ ಅರಿಯಲಾರದೆಯೋ ಅಥವಾ ಬೌದ್ಧಿಕ ಮಟ್ಟದ ಕೊರತೆಯಿಂದಲೋ ಕ್ಷುಲ್ಲಕ ವಿಚಾರಗಳಿಗೆ ಮಕ್ಕಳು ಮನೆ ಬಿಟ್ಟು ಹೋಗುವ ಅಥವಾ ಆತ್ಮಹತ್ಯೆಯಂತಹ ಆತುರದ ನಿರ್ಧಾರ ತೆಗೆಗೊಳ್ಳುತ್ತಿರುವ ಘಟನೆಗಳು ಅತಿಯಾಗಿ ವರದಿಯಾಗುತ್ತಿವೆ. ಅಂತಹದ್ದೇ ಮತ್ತೊಂದು ಪ್ರಕರಣ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಆಟೋ ಚಾಲಕನ ಸಾಮಾಜಿಕ ಪ್ರಜ್ಞೆಯು ಮನೆ ಬಿಟ್ಟು ತೆರಳಬೇಕಿದ್ದ ಬಾಲಕಿಯನ್ನು ಮರಳಿ ಪೋಷಕರ ಮಡಿಲು ಸೇರುವಂತೆ ಮಾಡಿದೆ.
ತರಗತಿ ಬಿಟ್ಟು ಮಾಲ್ಗೆ ಹೋದ ಬಾಲಕಿ: ಬೆಂಗಳೂರಿನ ವಿಜಯನಗರದ ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿ ಓದುತ್ತಿದ್ದ 14 ವರ್ಷದ ಬಾಲಕಿ ಜನವರಿ 4ರಂದು ತರಗತಿಗೆ ಹೋಗದೇ ಸ್ನೇಹಿತರ ಜೊತೆ ಸಮೀಪದ ಮಾಲ್ಗೆ ಹೋಗಿದ್ದಾಳೆ. ವಿಷಯ ತಿಳಿದ ಶಾಲಾ ಆಡಳಿತ ಮಂಡಳಿ ಬಾಲಕಿಯ ಪೋಷಕರನ್ನು ಕರೆಯಿಸಿ ಬುದ್ಧಿವಾದ ಹೇಳಿದ್ದರು. ಪೋಷಕರೂ ಸಹ ಮಗಳಿಗೆ ಬೈದು ಬುದ್ಧಿ ಹೇಳಿದ್ದಾರೆ. ಇದರಿಂದ ಬೇಸತ್ತ ಬಾಲಕಿ ಅದೇ ದಿನ ಸಂಜೆ ಮನೆಯಲ್ಲಿದ್ದ ಸ್ಕೂಟರ್ ಹತ್ತಿ ಹೊರಟವಳು ಮನೆಗೆ ಮರಳಿರಲಿಲ್ಲ. ಗಾಬರಿಯಾದ ಪೋಷಕರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಕ್ಷಣ ಎಚ್ಚೆತ್ತ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಾಲಕಿಯ ಪತ್ತೆಗಾಗಿ ಆಕೆಯ ಫೋಟೋಗಳನ್ನು ಸುತ್ತಮುತ್ತಲಿನ ಠಾಣೆಗಳಿಗೆ ರವಾನಿಸಿದ್ದರು.
ಆಟೋ ಚಾಲಕನ ಸಮಯ ಪ್ರಜ್ಞೆ:ಅದೇ ದಿನ ಸಂಜೆ ಗೊರಗುಂಟೆಪಾಳ್ಯದ ಬಸ್ ನಿಲ್ದಾಣದಲ್ಲಿ ಒಬ್ಬಂಟಿಯಾಗಿ ನಿಂತಿದ್ದ ಬಾಲಕಿಯನ್ನು ಆಟೋ ಚಾಲಕನೊಬ್ಬ ಗಮನಿಸಿದ್ದಾನೆ. ಬಾಲಕಿಯ ಬಳಿ ವಿಚಾರಿಸಿದಾಗ ಆಕೆಯ ಅನುಮಾನಾಸ್ಪದ ಉತ್ತರಗಳನ್ನು ಮನಗಂಡ ಚಾಲಕ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದಾನೆ. ವಿಚಾರ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಾಲಕಿಯನ್ನು ಕರೆದೊಯ್ದು ಹೆತ್ತವರ ಮಡಿಲು ಸೇರಿಸಿದ್ದಾರೆ. ಆಟೋ ಚಾಲಕನ ಸಾಮಾಜಿಕ ಪ್ರಜ್ಞೆಗೆ ಪೊಲೀಸರು, ಬಾಲಕಿಯ ಪೋಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಆಟೋ ಚಾಲಕನಿಗೆ ನಾಳೆ ಸನ್ಮಾನ ಮಾಡುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.