ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಕ್ಷುಲ್ಲಕ ವಿಚಾರಗಳಿಗೆ ರಸ್ತೆಯಲ್ಲೇ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪುತ್ತಿರುವ ಘಟನೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಮಾಗಡಿ ರಸ್ತೆಯಲ್ಲಿ ವೃದ್ಧನನ್ನು ದ್ವಿಚಕ್ರ ವಾಹನದಲ್ಲಿ ರಸ್ತೆಯಲ್ಲೇ ಎಳೆದೊಯ್ದ ಘಟನೆ ಬಳಿಕ ಉಳ್ಳಾಲದಲ್ಲಿ ಮಹಿಳೆಯು ಯುವಕಯೊಬ್ಬನನ್ನು ಕಾರಿನ ಬಾನೆಟ್ ಮೇಲೆ ಕೊಂಡೊಯ್ದ ಘಟನೆಗಳು ಮಾಸುವ ಮುನ್ನವೇ ಅಂತಹುದ್ದೇ ಗಲಾಟೆ ಪ್ರಕರಣ ಮಂಗಳವಾರ ನಡೆದಿದೆ. ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಇಕೋಸ್ಪೇಸ್ ಸಿಗ್ನಲ್ ಬಳಿ ಕಾರು ಚಾಲಕ ಹಾಗೂ ಆಟೋ ಡ್ರೈವರ್ ನಡುವೆ ರಸ್ತೆಯಲ್ಲೇ ಮಾರಾಮಾರಿ ನಡೆದಿದೆ.
ಇಕೋಸ್ಪೇಸ್ ಸಿಗ್ನಲ್ ಬಳಿ ಅಕ್ಕಪಕ್ಕ ತೆರಳುತ್ತಿದ್ದ ಆಟೋ ರಿಕ್ಷಾಗೆ ಕಾರು ಸ್ವಲ್ಪ ಟಚ್ ಆಗಿದೆ ಎನ್ನಲಾಗಿದೆ. ಇಷ್ಟಕ್ಕೇ ಕುಪಿತಗೊಂಡ ಆಟೋ ಚಾಲಕ ವಾಹನದಿಂದ ಇಳಿದು ಪಕ್ಕದಲ್ಲಿ ತೆರಳುತ್ತಿದ್ದ ಕಾರು ಚಾಲಕನ ಮೇಲೆ ರಸ್ತೆಯಲ್ಲೇ ಹಲ್ಲೆ ನಡೆಸಿದ್ದಾನೆ. ಸಾರ್ವಜನಿಕವಾಗಿ ಕಾರು ಚಾಲಕನ ಮೇಲೆ ಆಟೋ ಚಾಲಕ ಹಲ್ಲೆ ಮಾಡುತ್ತಿರುವ ದೃಶ್ಯ ಹಿಂಬದಿಯಲ್ಲಿ ಸಾಗುತ್ತಿದ್ದ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟ್ಟಿಟರ್ನಲ್ಲಿ ವಿಡಿಯೋ ಪೋಸ್ಟ್:ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ಟಿಟರ್ನಲ್ಲಿ ಬೆಂಗಳೂರು ಸಂಚಾರ ಪೊಲೀಸರು, ಇತರ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಲಾಗಿದೆ. ಈ ಟ್ವೀಟ್ಗೆ ಪ್ರತಿಕ್ರಿಯಿಸಿದ ಬೆಳ್ಳಂದೂರು ಪೊಲೀಸರು 'ಆಟೋ ರಿಕ್ಷಾದ ನಂಬರ್ ಪ್ಲೇಟ್ ಅಸ್ಪಷ್ಟವಾಗಿದೆ. ಈಗಾಗಲೇ ಕಾರು ಚಾಲಕನ ವಿಳಾಸ ಪತ್ತೆ ಹಚ್ಚಲಾಗಿದೆ. ಆತನ ಹೇಳಿಕೆ ಪಡೆದ ಬಳಿಕ ಆಟೋ ಚಾಲಕನನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಿದ್ದೇವೆ' ಎಂದಿದ್ದಾರೆ.
ಕಳೆದ ತಿಂಗಳಲ್ಲೂ ನಡೆದಿದ್ದವು ರಸ್ತೆ ಗಲಾಟೆ ಪ್ರಕರಣಗಳು:ಕಳೆದ ಜನವರಿ 20ರಂದು ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಉಲ್ಲಾಳ ಮುಖ್ಯರಸ್ತೆ ಜಂಕ್ಷನ್ ಬಳಿ ಯುವಕ ಹಾಗೂ ಕಾರು ಚಾಲಕಿ ನಡುವೆ ಗಲಾಟೆ ನಡೆದಿತ್ತು. ಇಬ್ಬರ ನಡುವೆ ವಾಗ್ವಾದ ನಡೆದು, ಬಳಿಕ ಮಂಗಳೂರು ಪಿಯು ಕಾಲೇಜ್ ಬಳಿ ಆ ಮಹಿಳೆಯ ಕಾರನ್ನು ಯುವಕ ಅಡ್ಡಗಟ್ಟಿದ್ದ. ಈ ವೇಳೆ ಕೋಪಗೊಂಡ ಮಹಿಳೆ ಕಾರನ್ನು ಮುಂದೆ ಚಲಾಯಿಸಲು ಹೋಗುತ್ತಿದ್ದಂತೆ ಯುವಕ ಅವರ ಕಾರಿನ ಬಾನೆಟ್ ಮೇಲೆ ಹತ್ತಿದ್ದ. ಆಗ ಚಾಲನೆ ಮುಂದುವರೆಸಿದ್ದ ಮಹಿಳೆ ಯುವಕನನ್ನು ಕಾರಿನ ಬಾನೆಟ್ ಮೇಲೆಯೇ ಸುಮಾರು ದೂರದವರೆಗೆ ಕೊಂಡೊಯ್ದಿದ್ದಳು. ಈ ಸಂಬಂಧ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿತ್ತು. ಪೊಲೀಸರು ಕಾರಿನ ಚಾಲಕಿ, ಯುವಕ ಹಾಗೂ ಆತನ ಕಡೆಯವರು ಸೇರಿ ಐವರನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದರು.