ಬೆಂಗಳೂರು: ರ‍್ಯಾಪಿಡೋ ಕ್ಯಾಪ್ಟನ್ ತಡೆದ ಆಟೋ ಚಾಲಕನೊಬ್ಬ ಆತನ ಕೈಯ್ಯಲ್ಲಿದ್ದ ಹೆಲ್ಮೆಟ್ ಒಡೆದು ಹಾಕಿ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸುವ ಜೊತೆಗೆ ಅನುಚಿತವಾಗಿ ವರ್ತಿಸಿರುವ ಘಟನೆ ಇಂದಿರಾನಗರ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ. ನಿಲ್ದಾಣದ ಬಳಿ ಗ್ರಾಹಕರನ್ನು ತನ್ನ ಸ್ಕೂಟರ್ಗೆ ಹತ್ತಿಸಿಕೊಂಡ ಎಂಬ ಕಾರಣಕ್ಕೆ ರೊಚ್ಚಿಗೆದ್ದ ಆಟೋ ಚಾಲಕ, ಪುಡಿ ರೌಡಿಯಂತೆ ಪುಂಡಾಟಿಕೆ ಮೆರೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೇಶದ ವಿವಿಧ ಮಹಾನಗರಗಳಲ್ಲಿ ರ‍್ಯಾಪಿಡೋ ಸೇರಿದಂತೆ ಹಲವು ಆ್ಯಪ್ ಆಧಾರಿತ ದ್ವಿಚಕ್ರ ವಾಹನ ಟ್ಯಾಕ್ಸಿ ಸೇವೆಗಳು ಈಗಾಗಲೇ ಚಾಲ್ತಿಯಲ್ಲಿವೆ. ಆಟೋ, ಟ್ಯಾಕ್ಸಿಗಿಂತಲೂ ಕಡಿಮೆ ದರದಲ್ಲಿ ಸೇವೆ ನೀಡುತ್ತಿರುವುದರಿಂದ ಜನರು ಹೆಚ್ಚೆಚ್ಚು ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ದಿನದ ದುಡಿಮೆ ನಂಬಿಕೊಂಡು ಬದುಕುವ ಆಟೋ ಚಾಲಕರಿಗೆ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತಿದೆ. ಅಲ್ಲದೆ, ರ‍್ಯಾಪಿಡೋದಂತಹ ಸಂಸ್ಥೆಗಳು ಯಾವುದೇ ದಾಖಲೆಗಳನ್ನ ಪಡೆಯದೇ ಅನ್ಯ ರಾಜ್ಯ, ದೇಶದವರನ್ನು ಬೇಕಾದರೂ ಕೆಲಸಕ್ಕೆ ನೇಮಿಸಿಕೊಳ್ಳುತ್ತಿವೆ. ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು ಎನ್ನುವುದು ಆಟೋ ಚಾಲಕರ ವಾದ. ಇದೇ ನಿಟ್ಟಿನಲ್ಲಿ ಆಗಾಗ್ಗೆ ಈ ರೀತಿ ಬೈಕ್, ಟ್ಯಾಕ್ಸಿ ಚಾಲಕರನ್ನ ತಡೆದು ನಿಂದಿಸುವುದು, ಧಮ್ಕಿ ಹಾಕುವಂತಹ ಘಟನೆಗಳು ನಡೆಯುತ್ತಲೇ ಇವೆ.
ಇದನ್ನೂ ಓದಿ:ರ‍್ಯಾಪಿಡೋ ಸಂಸ್ಥೆಯಿಂದ ಕೋವಿಡ್ ವಾರಿಯರ್‌ಗಳಿಗೆ ಕೃತಜ್ಞತೆ ಸಲ್ಲಿಕೆ
ಇತ್ತ ಸಾರ್ವಜನಿಕರು ಮಾತ್ರ ಆಟೋ ಚಾಲಕರ ವರ್ತನೆಯ ವಿರುದ್ಧ ಕಿಡಿಕಾರುತ್ತಿದ್ದಾರೆ. "ಮೊದಲನೆಯದಾಗಿ ನಗರದಲ್ಲಿ ಆಟೋ ಚಾಲಕರು ಮೀಟರ್ ಹಾಕಿ ಆಟೋ ಸೇವೆ ನೀಡುತ್ತಿಲ್ಲ. ಗ್ರಾಹಕರು ಕರೆದ ಸ್ಥಳಕ್ಕೆ ಬರಲು ಒಪ್ಪದೇ ದುಪ್ಪಟ್ಟು ಹಣ ಕೇಳುತ್ತಾರೆ. ಅದರ ಬದಲು ಕಡಿಮೆ ದರದಲ್ಲಿ ಉತ್ತಮ ಸೇವೆ ನೀಡುವ ಬೈಕ್, ಟ್ಯಾಕ್ಸಿ ಬಳಸಿದರೆ ತಪ್ಪೇನು?" ಎಂಬುದು ಸಾರ್ವಜನಿಕರ ವಾದ.