ಬೆಂಗಳೂರು :ಗುರು ರಾಘವೇಂದ್ರ ಬ್ಯಾಂಕ್ನ ಆಡಳಿತಾಧಿಕಾರಿಗೆ ಠೇವಣಿ ನವೀಕರಣ ಹಾಗೂ ವಸೂಲಿ ಪ್ರಕ್ರಿಯೆ ಆರಂಭಿಸುವ ಅಧಿಕಾರ ನೀಡುವ ಬಗ್ಗೆ ಮುಂದಿನ ವಾರ ಆದೇಶ ಹೊರಡಿಸುತ್ತೇವೆ ಎಂದು ಹೈಕೋರ್ಟ್ ತಿಳಿಸಿದೆ. ಬ್ಯಾಂಕ್ನ ಅವ್ಯವಹಾರದ ತನಿಖೆ ಕೋರಿ ಬಸವನಗುಡಿಯ ಕೆ ಆರ್ ನರಸಿಂಹಮೂರ್ತಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ನಿಲುವು ವ್ಯಕ್ತಪಡಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ವೆಂಕಟೇಶ್ ದಳವಾಯಿ ವಾದಿಸಿ, ಆಡಳಿತಾಧಿಕಾರಿಗೆ ಠೇವಣಿ ನವೀಕರಣ ಅಧಿಕಾರ ನೀಡಬೇಕು. ಠೇವಣಿದಾರರಿಂದ ಕ್ಲೇಮು ಆಹ್ವಾನಿಸಿದ ನಂತರವೇ ಎಷ್ಟು ಮೊತ್ತ ಪಾವತಿಸಬೇಕಿದೆ ಎಂಬ ಅಂದಾಜು ಸಿಗುತ್ತದೆ. ಹಾಗೆಯೇ, ಸಕ್ಷಮ ಪ್ರಾಧಿಕಾರ ಎಲ್ಲ ಆಸ್ತಿಗಳ ಮೌಲ್ಯಮಾಪನ ಮಾಡಿದ ಬಳಿಕವೇ ಠೇವಣಿದಾರರಿಗೆ ಹಣ ಹಂಚಿಕೆಯಾಗಲಿದೆ ಎಂದು ವಿವರಿಸಿದರು.
ಆಡಳಿತಾಧಿಕಾರಿ ಶ್ಯಾಮ್ ಸಂದರ್ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ, ನಿತ್ಯ ಕನಿಷ್ಠ 10 ಠೇವಣಿದಾರರು ಠೇವಣಿ ನವೀಕರಣಕ್ಕೆ ಮನವಿ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು. ವಾದ ಆಲಿಸಿದ ಪೀಠ, ಠೇವಣಿದಾರರ ಠೇವಣಿಯನ್ನು ನವೀಕರಿಸಲು ಆಡಳಿತಾಧಿಕಾರಿಗೆ ಅಧಿಕಾರ ನೀಡಬಹುದು.
ಆದರೆ, ಠೇವಣಿ ನವೀಕರಿಸಿದ ನಂತರ ಅದಕ್ಕೆ ಬಡ್ಡಿಯನ್ನು ಬಯಸಿದರೆ ಆಡಳಿತಾಧಿಕಾರಿಯೇ ಹೊಣೆಗಾರರಾಗುತ್ತಾರೆ. ಆದರೆ, ಜಪ್ತಿ ಮಾಡಲಾದ ಆಸ್ತಿಯ ಮೌಲ್ಯ ಆಧರಿಸಿ ಬಡ್ಡಿ ಸಿಗುತ್ತದೆಯೇ ಅಥವಾ ಠೇವಣಿಯಲ್ಲಿ ಎಷ್ಟು ಹಣ ವಾಪಸ್ ಸಿಗುತ್ತದೆ ಎಂಬುದು ನಿರ್ಧಾರವಾಗುತ್ತದೆ.
ಹೀಗಾಗಿ, ಠೇವಣಿಯನ್ನು ನವೀಕರಣ ಮಾಡಿಕೊಳ್ಳಲು ಬಯಸುವವರಿಗೆ ಮುಂಚಿತವಾಗಿಯೇ ಸ್ಥಿತಿಗತಿ ವಿವರಿಸಿ ಮುಚ್ಚಳಿಕೆ ಬರೆಯಿಸಿಕೊಂಡ ನಂತರ ನವೀಕರಣ ಮಾಡಿಕೊಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಆಡಳಿತಾಧಿಕಾರಿಗೆ ಠೇವಣಿ ನವೀಕರಣ ಮತ್ತು ವಸೂಲಿ ಪ್ರಕ್ರಿಯೆ ಆರಂಭಿಸುವ ಅಧಿಕಾರ ನೀಡುವ ಬಗ್ಗೆ ಮುಂದಿನ ವಾರ ಆದೇಶಿಸಲಾಗುವುದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.