ಬೆಂಗಳೂರು: ಆಸ್ಟ್ರೇಲಿಯಾ ದೇಶದ ನ್ಯೂ ಸೌತ್ ವೇಲ್ಸ್ ಪ್ರೀಮಿಯರ್ ಡೊಮಿನಿಕ್ ಪೆರೊಟ್ವೆಟ್ ನೇತೃತ್ವದ ನಿಯೋಗವು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ವಿವಿಧ ವಿಷಯಗಳ ಕುರಿತು ಚರ್ಚಿಸಿತು.
ಈ ವೇಳೆ ಮಾತನಾಡಿದ ಡೊಮಿನಿಕ್ ಪೆರೊಟ್ವೆಟ್, ಆಸ್ಟ್ರೇಲಿಯಾ ಸರ್ಕಾರವು ಇಂಡಿಯಾ ಆರ್ಥಿಕ ಕಾರ್ಯತಂತ್ರಕ್ಕಾಗಿ 280 ಮಿಲಿಯನ್ ಡಾಲರ್ಗಳ ಅನುದಾನವನ್ನು ಒದಗಿಸಿದೆ. ಭಾರತದೊಂದಿಗೆ ಆರ್ಥಿಕ ಪಾಲುದಾರಿಕೆಯನ್ನು ವೃದ್ಧಿಸಲು ಈ ಕಾರ್ಯತಂತ್ರ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಸೈಬರ್ ಸುರಕ್ಷತಾ ನೀತಿ ಹಾಗೂ ಶ್ರೇಷ್ಠತಾ ಕೇಂದ್ರಗಳ ಬಗ್ಗೆ ಉತ್ಸುಕತೆ ತೋರಿದ ಅವರು, ಆಸ್ಟ್ರೇಲಿಯಾ- ಬೆಂಗಳೂರು ಟೆಕ್ ಸಭೆಯಲ್ಲಿ ಆಸ್ಟ್ರೇಲಿಯಾ ಸತತವಾಗಿ ನಾಲ್ಕು ವರ್ಷಗಳೂ ಭಾಗಿಯಾಗಿದೆ. ಈ ವರ್ಷವೂ ಭಾಗವಹಿಸಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಜಗತ್ತಿನ ವಿವಿಧ ದೇಶಗಳ ಮುಖ್ಯಸ್ಥರು ಹಿಂದೆ ನವದೆಹಲಿಗೆ ಭೇಟಿ ನೀಡುತ್ತಿದ್ದರು. ಆದರೆ, ಈಗ ಅವರೆಲ್ಲರೂ ಬೆಂಗಳೂರಿಗೆ ಇನ್‍ಫೋಸಿಸ್ ಹಾಗೂ ವಿಪ್ರೋ ಮುಂತಾದ ಸಂಸ್ಥೆಗಳಿಗೆ ಭೇಟಿ ನೀಡುತ್ತಾರೆ. ಜ್ಞಾನವೇ ಶಕ್ತಿ ಎನ್ನುವುದು ಈ ಮೂಲಕ ನಿರೂಪಿತವಾಗಿದೆ. ಕರ್ನಾಟಕ ರಾಜ್ಯ ಆರ್ ಅಂಡ್ ಡಿ, ಜೆನಿಟಿಕ್ಸ್, ಏರೋಸ್ಪೇಸ್, ಶಿಕ್ಷಣ ಆರೋಗ್ಯ, ನಾವೀನ್ಯತೆ, ಎಲೆಕ್ಟ್ರಿಕ್ ವೆಹಿಕಲ್, ಮುಂತಾದ ವಲಯಗಳಲ್ಲಿ ಮುಂಚೂಣಿಯಲ್ಲಿದ್ದು ಹೂಡಿಕೆಗಳಿಗೆ ಪ್ರಶಸ್ತ ಸ್ಥಳ ಎಂದರು.