ಬೆಂಗಳೂರು:ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಕುರಿತಾಗಿ ಕಾಂಗ್ರೆಸ್ ಕಾರ್ಯಕರ್ತ ಹಾಗು ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ವಿರುದ್ಧ ಆರೋಪ ಮಾಡಿರುವ ಸಾಮಾಜಿಕ ಕಾರ್ಯಕರ್ತ ವಿಜಯ್ ಡೆನ್ನಿಸ್ ವಿರುದ್ಧ ಪ್ರಕರಣ ದಾಖಲಾಗಿದೆ. ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಉಮಾಪತಿ ಶ್ರೀನಿವಾಸ್ ಗೌಡ ಸಲ್ಲಿಸಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಇಂದು ವಿಚಾರಣೆಗೆ ಹಾಜರಾಗುವಂತೆ ಡೆನ್ನಿಸ್ ಅವರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಸಿಆರ್ಪಿಸಿ 41(A) ಅಡಿಯಲ್ಲಿ ನೋಟಿಸ್ ನೀಡಲಾಗಿದೆ.
ವಿಚಾರಣೆಗೆ ಹಾಜರಾಗಲು ಎರಡರಿಂದ ಮೂರು ದಿನಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದೇನೆ. ಅನಾರೋಗ್ಯದಿಂದಾಗಿ ಸದ್ಯ ಹಾಜರಾಗಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಹಾಜರಾಗಿ ಪೂರಕ ಸಾಕ್ಷ್ಯಗಳನ್ನು ಒದಗಿಸುವುದಾಗಿ ಆಗ್ನೇಯ ವಿಭಾಗದ ಡಿಸಿಪಿ ಮತ್ತು ಹೆಚ್ಎಸ್ಆರ್ ಲೇಔಟ್ ಪೊಲೀಸ್ ಇನ್ಸ್ಪೆಕ್ಟರ್ಗೆ ಇ-ಮೇಲ್ ಮೂಲಕ ವಿಜಯ್ ಡೆನ್ನಿಸ್ ಮನವಿ ಮಾಡಿದ್ದಾರೆ. "ನನಗೆ ಮತ್ತು ನನ್ನ ಕುಟುಂಬಕ್ಕೆ ಉಮಾಪತಿ ಗೌಡ ಬೆಂಬಲಿಗರಿಂದ ಬೆದರಿಕೆ ಇದ್ದು, ಸೂಕ್ತ ಭದ್ರತೆ ನೀಡಬೇಕು" ಎಂದು ಅವರು ಇದೇ ವೇಳೆ ಕೋರಿದ್ದಾರೆ.
ಇದನ್ನೂ ಓದಿ:ಇನ್ಸ್‌ಪೆಕ್ಟರ್ ವರ್ಗಾವಣೆ ಕುರಿತ ಆಡಿಯೋ ವೈರಲ್ ವಿಚಾರ: ಪೊಲೀಸ್ ಠಾಣೆ ಮೆಟ್ಟಿಲೇರಿದ ಉಮಾಪತಿ ಶ್ರೀನಿವಾಸ್ ಗೌಡ