ಬೆಂಗಳೂರು: ನನ್ನ ಅಣ್ಣನ ಮಗನ ಕುಟುಂಬಕ್ಕೆ ಸಂಬಂಧಿಸಿದ ಕೌಟುಂಬಿಕ ಹಿಂಸಾಚಾರ ಪ್ರಕರಣದಲ್ಲಿ ಆಂಧ್ರಪ್ರದೇಶದ ಏಲೂರು ಪೊಲೀಸರು ತಮ್ಮನ್ನು ವಿಚಾರಣೆಗೆ ಕರೆದಿದ್ದರು. ಆದರೆ ತಮ್ಮನ್ನು ಪೊಲೀಸರು ಬಂಧಿಸಿಲ್ಲ. ಅಂತಹ ಅಪರಾಧವನ್ನು ತಾವು ಮಾಡಿಲ್ಲ. ತಮ್ಮನ್ನು ಬಂಧಿಸಿರುವುದಾಗಿ ವರದಿ ಮಾಡಿರುವುದು ಸರಿಯಲ್ಲ ಎಂದು ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬೊಮ್ಮನಹಳ್ಳಿ ಬಾಬು ಸ್ಪಷ್ಟಪಡಿಸಿದ್ದಾರೆ.
ಪ್ರೆಸ್ಕ್ಲಬ್ನಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಬು, ವಾಸ್ತವವಾಗಿ ಈ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ತಮಗೆ ಎರಡು ಮೂರು ಮದುವೆಯಾಗಿಲ್ಲ. ನನಗಿರುವುದು ಒಬ್ಬಳೇ ಹೆಂಡತಿ, ಮಗ, ಮಗಳು ಇದ್ದಾಳೆ. ಆದರೆ ತಮ್ಮ ಕುಟುಂಬಕ್ಕೆ ಸಂಬಂಧಿಸಿದ ತಪ್ಪು ವರದಿಗಳಿಂದ ಮಾನಸಿಕ ಹಿಂಸೆಯಾಗಿದ್ದು, ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯಾಗಿದೆ. ತಮ್ಮ ಮೇಲೆ ಅನಗತ್ಯವಾಗಿ ತೇಜೋವಧೆ ನಡೆಯುತ್ತಿದ್ದು, ಇದು ತಕ್ಷಣವೇ ನಿಲ್ಲಬೇಕು ಎಂದು ಮನವಿ ಮಾಡಿದರು.
ನಾನು ನನ್ನ ಅಣ್ಣನ ಮಗನಿಗೆ ಎಂಬಿಬಿಎಸ್ ಓದಿಸಿ, 9 ತಿಂಗಳ ಹಿಂದೆ ಆಂಧ್ರಪ್ರದೇಶದ ಮೇಯರ್ ಒಬ್ಬರ ಮಗಳ ಜೊತೆ ಮದುವೆ ಮಾಡಿಸಿದೆ. ನಂತರ ಆ ಯುವತಿ ಮನೆಯ ಕುಟುಂಬದವರು ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ಪಿತೂರಿ ಮಾಡಲು ಶುರುಮಾಡಿದರು. ನಾನು ಸಾಕಿದ ಅಣ್ಣನ ಮಗ ನನ್ನ ವಿರುದ್ಧ ತಿರುಗಿಬಿದ್ದ. ಆಗ ನಾನು ಫ್ರೇಜರ್ ಟೌನ್ ಬಳಿ ಇರುವ ಮನೆ ಮತ್ತು ಕಾರು ನೀಡಿ ಆತನನ್ನು ಮನೆಯಿಂದ ಹೊರಹಾಕಿದೆ ಎಂದರು.
ಕೌಟುಂಬಿಕ ಕಲಹ ಪ್ರಕರಣ:ಮದುವೆಯಾದ ಬಳಿಕ ಕೌಟುಂಬಿಕ ಕಲಹದ ಕಾರಣ ಮೇಯರ್ ಕುಟುಂಬದವರು ನನ್ನ ಮೇಲೆ, ನನ್ನ ಹೆಂಡತಿ ಮತ್ತು ಮಗನ ವಿರುದ್ಧ ಕೌಟುಂಬಿಕ ಹಿಂಸಾಚಾರದ ದೂರು ನೀಡಿದ್ದಾರೆ. ಪೊಲೀಸರು ಎಪ್ಐಆರ್ ದಾಖಲಿಸಿದ್ದಾರೆ. ಈ ಪ್ರಕರಣದ ವಿಚಾರಣೆಗಾಗಿ ನಮ್ಮನ್ನು ಏಲೂರು ಪೊಲೀಸರು ಕರೆದುಕೊಂಡು ಹೋಗಿದ್ದರು. ಮೂಲಭೂತವಾಗಿ ಕೌಟುಂಬಿಕ ಹಿಂಸಾಚಾರ ಪ್ರಕರಣದಲ್ಲಿ 41 ದಿನಗಳ ನೋಟಿಸ್ ನೀಡಬೇಕು. ಈ ಅವಧಿಯಲ್ಲಿ ಯಾವುದಾದರೂ ಒಂದು ದಿನ ಪೊಲೀಸರಿಗೆ ಲಿಖಿತ ಹೇಳಿಕೆ ನೀಡಬೇಕು. ಈ ಪ್ರಕರಣದಲ್ಲಿ ಹೆಸರಿಸಲಾದ ಯಾರನ್ನೂ ಬಂಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಕೂಡ ಸ್ಪಷ್ಟವಾಗಿ ಹೇಳಿದೆ ಎಂದು ತಿಳಿಸಿದರು.