ಬೆಂಗಳೂರು : ಅತ್ತಿಬೆಲೆ ಪಟಾಕಿ ಗೋದಾಮು ದುರಂತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವಕ ದಿನೇಶ್ ಬುಧವಾರ ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆನೇಕಲ್ ಹಿಂದಿನ ತಹಶೀಲ್ದಾರ್ ಸೇರಿದಂತೆ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಈ ಹಿಂದಿನ ತಹಶೀಲ್ದಾರ್ ಶಶಿಧರ್ ಮಡ್ಕಳ್, ಅತ್ತಿಬೆಲೆ ನಾಡ ಕಚೇರಿ ಡೆಪ್ಯುಟಿ ತಹಶಿಲ್ದಾರ್ ಶ್ರೀಧರ್ ವಿ.ಸಿ, ಅತ್ತಿಬೆಲೆಯ ಈ ಹಿಂದಿನ ವೃತ್ತ ರಾಜಸ್ವ ನಿರೀಕ್ಷಕ ಪುಷ್ಪರಾಜ್, ಗ್ರಾಮ ಆಡಳಿತಾಧಿಕಾರಿ ಭಾಗೇಶ್ ಹೊಸಮನಿ ಅಮಾನತಿಗೆ ಆದೇಶಿಸಲಾಗಿದ್ದು, ನಂತರ ಇಲಾಖಾ ತನಿಖೆಗೆ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ಸೂಚನೆ ನೀಡಿದ್ದಾರೆ.
ಆನೇಕಲ್ ತಹಶೀಲ್ದಾರ್ ಸೇರಿದಂತೆ ಅತ್ತಿಬೆಲೆ ಹಿಂದಿನ ಇನ್ಸ್‌ಪೆಕ್ಟರ್, ಅಗ್ನಿಶಾಮಕದಳದ ಮುಖ್ಯ ಇನ್ಸ್‌ಪೆಕ್ಟರ್ ಅಮಾನತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದರು. ಬೆಂಗಳೂರು ಜಿಲ್ಲಾಧಿಕಾರಿಗೆ ಮತ್ತು ಬೆಂಗಳೂರು ಎಸ್ಪಿಗೆ ನೊಟೀಸ್ ಜಾರಿಗೊಳಿಸಲು ತಿಳಿಸಿದ್ದರು.
ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಇನ್ನೂ 7 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೆೇಂಟ್ ಜಾನ್ ಆಸ್ಪತ್ರೆಯಲ್ಲಿ ಮೂವರು ಹಾಗು ಅತ್ತಿಬೆಲೆ ಆಕ್ಷಪರ್ಡ್ ಆಸ್ಪತ್ರೆಯಲ್ಲಿ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ. ವೆಂಕಟೇಶ್ ಎಂಬ ಗಾಯಾಳು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸರ್ಕಾರಕ್ಕೆ ಬೊಮ್ಮಾಯಿ ಎಚ್ಚರಿಕೆ: ಹಾವೇರಿ, ಅತ್ತಿಬೆಲೆ ದುರಂತಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಮಾಡಬೇಕು. ಮೊದಲು ತಪ್ಪು ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಂಡರೆ ಇಂತಹ ಘಟನೆಗಳು ನಿಲ್ಲುತ್ತವೆ. ಅತ್ತಿಬೆಲೆ ಘಟನೆಗೆ ಸ್ಥಳೀಯ ಜಿಲ್ಲಾಡಳಿತದ ನಿರ್ಲಕ್ಷ್ಯ ಕಾರಣ. ಹಣಕಾಸು ವ್ಯವಹಾರ ಮಾಡಿಕೊಂಡು ಅಕ್ರಮವಾಗಿ ಲೈಸನ್ಸ್ ಕೊಡೋದು, ಅಕ್ರಮ ಶೇಖರಣೆಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಇಷ್ಟು ದೊಡ್ಡ ದುರಂತ ಆಗಿದೆ. ಪಟಾಕಿ ನಿರ್ವಹಣೆಯ ನಿಯಮಗಳ ಪಾಲನೆ ಆಗುತ್ತಿಲ್ಲ. ಸರ್ಕಾರ ಕಣ್ತೆರೆಯದಿದ್ದರೆ ಇನ್ನಷ್ಟು ಘಟನೆಗಳು ನಡೆಯಲಿವೆ ಎಂದು ಇತ್ತೇಚೆಗೆಬಸವರಾಜ ಬೊಮ್ಮಾಯಿ ಸರ್ಕಾರವನ್ನು ಎಚ್ಚರಿಸಿದ್ದರು.
ಇದನ್ನೂ ಓದಿ :ಅತ್ತಿಬೆಲೆ ಪಟಾಕಿ ದುರಂತ, 14ಕ್ಕೇರಿದ ಸಾವಿನ ಸಂಖ್ಯೆ: ಘಟನಾ ಸ್ಥಳಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಭೇಟಿ