ಕರ್ನಾಟಕ

karnataka

ETV Bharat / state

ಅತ್ತಿಬೆಲೆ ಪಟಾಕಿ ದುರಂತ : ಠಾಣೆಗೆ ಭೇಟಿ ನೀಡಿದ ಸಿಐಡಿ ಐಜಿ ಪ್ರವೀಣ್ ಮಧುಕರ್ ಪವಾರ್ - ಇಂದಿನಿಂದಲೇ ಸಿಐಡಿ ತನಿಖೆ ಆರಂಭ

ಅತ್ತಿಬೆಲೆ ಪಟಾಕಿ ದುರಂತ ಸಂಬಂಧ ತನಿಖೆ ನಡೆಸಲು ಇಂದು ಸಿಐಡಿ ಅಧಿಕಾರಿಗಳು ಅತ್ತಿಬೆಲೆ ಪೊಲೀಸ್​ ಠಾಣೆಗೆ ಆಗಮಿಸಿದ್ದಾರೆ

Etv Bharat
Etv Bharat

By ETV Bharat Karnataka Team

Published : Oct 9, 2023, 12:25 PM IST

Updated : Oct 9, 2023, 1:24 PM IST

ಅತ್ತಿಬೆಲೆ ಪಟಾಕಿ ದುರಂತ : ಠಾಣೆಗೆ ಭೇಟಿ ನೀಡಿದ ಸಿಐಡಿ ಐಜಿ ಪ್ರವೀಣ್ ಮಧುಕರ್ ಪವಾರ್

ಆನೇಕಲ್ (ಬೆಂಗಳೂರು): ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ಶನಿವಾರ ಸಂಭವಿಸಿದ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಲು ಸಿಐಡಿ ಅಧಿಕಾರಿಗಳು ಇಂದು ಅತ್ತಿಬೆಲೆ ಪೊಲೀಸ್​ ಠಾಣೆಗೆ ಭೇಟಿ ನೀಡಿದ್ದಾರೆ. ಸಿಐಡಿ ಐಜಿ ಪ್ರವೀಣ್ ಮಧುಕರ್ ಪವಾರ್, ಸಿಐಡಿ ಎಸ್ಪಿ ವೆಂಕಟೇಶ್, ಡಿವೈಎಸ್ಪಿ ಶ್ರೀನಿವಾಸ್, ಮೂವರು ಇನ್​ಸ್ಪೆಕ್ಟರ್​​ ಇಲ್ಲಿನ ಠಾಣೆಗೆ ಆಗಮಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸ್ ಇಲಾಖೆಯು ಸಿಐಡಿ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದೆ. ಜೊತೆಗೆ ಪಟಾಕಿ ಅಂಗಡಿ ಪರವಾನಗಿ ಹೊಂದಿದ ರಾಮಸ್ವಾಮಿರೆಡ್ಡಿಯಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಈ ಸಂಬಂಧ ಸ್ಥಳದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈಗಾಗಲೇ ದೌಡಾಯಿಸಿದ್ದಾರೆ. ಭಾನುವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವುದಾಗಿ ಹೇಳಿದ್ದರು.

ಸಿಐಡಿ ತನಿಖೆ :ಪಟಾಕಿ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಮತ್ತು ಇಲಾಖಾಧಿಕಾರಿಗಳು ನೀಡಿರುವ ನಿರಪೇಕ್ಷಣಾ ಪತ್ರದ ಕುರಿತು ಸಿಐಡಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಗೋದಾಮಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ತಮಿಳುನಾಡಿನ ಇತರ ಕಾರ್ಮಿಕ‌ ವಿದ್ಯಾರ್ಥಿಗಳನ್ನೂ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಲಿದ್ದಾರೆ. ಅಲ್ಲದೇ ದಾಸ್ತಾನು ಮಳಿಗೆಯಲ್ಲಿ ಕೈಗೊಳ್ಳಲಾಗಿರುವ ಸುರಕ್ಷತಾ ಕ್ರಮಗಳ ಬಗ್ಗೆ ಮತ್ತು ಜೊತೆಗೆ ಮೃತರ ಕುಟುಂಬಸ್ಥರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಈಗಾಗಲೇ ಪಟಾಕಿ ಅಂಗಡಿ ಪರವಾನಗಿ ಪಡೆದಿರುವ ರಾಮಸ್ವಾಮಿ‌ ಮಗ‌ ನವೀನ್ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸಿಎಂ, ಡಿಸಿಎಂ :ಭಾನುವಾರ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದರು. ಈ ವೇಳೆ, ಮಾಧ್ಯಮಗಳ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ, ಅತ್ತಿಬೆಲೆಯ ಪಟಾಕಿ ಗೋದಾಮಿನಲ್ಲಿ ನಡೆದ ಅಗ್ನಿ ಅವಘಡ ಪ್ರಕರಣದಲ್ಲಿ ಒಟ್ಟು 14 ಮಂದಿ ಸಾವನ್ನಪ್ಪಿದ್ದು, 7 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಘಟನೆ ನಡೆದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದರು. ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗುವುದು. ಸಿಐಡಿಯು ಘಟನೆ ಹಿಂದಿರುವ ಕಾರಣ ಮತ್ತು ಆರೋಪಿಗಳ ವಿರುದ್ಧ ತನಿಖೆ ನಡೆಸಲಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂದು ತಿಳಿಸಿದ್ದರು.

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾತನಾಡಿ, ಇದೊಂದು ಘೋರ ಘಟನೆ. ಘಟನೆ ಸಂಬಂಧ ಇನ್ನೆರಡು ದಿನಗಳಲ್ಲಿ ಸೂಕ್ತ ಕ್ರಮಕೈಗೊಳ್ಳುತ್ತೇವೆ. ಅಗ್ನಿ ದುರಂತದಲ್ಲಿ ಮೃತಪಟ್ಟವರಿಗೆ ಈಗಾಗಲೇ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದೇವೆ ಮತ್ತು ಗಾಯಾಳುಗಳ ಆಸ್ಪತ್ರೆ ವೆಚ್ಚವನ್ನು ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದರು.

ಬಳಿಕ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್​ ಅವರು ಅತ್ತಿಬೆಲೆ ಪಟಾಕಿ ದುರಂತದಲ್ಲಿ ಗಾಯಗೊಂಡು ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಈ ವೇಳೆ ಗಾಯಾಳುಗಳ ಸಂಬಂಧಿಕರಿಗೆ ಧೈರ್ಯ ತುಂಬಿದರು. ವೈದ್ಯರಲ್ಲಿ ಗಾಯಾಳುಗಳಿಗೆ ಅಗತ್ಯ ಇರುವ ಎಲ್ಲಾ ಚಿಕಿತ್ಸಾ ಸವಲತ್ತುಗಳನ್ನು ಒದಗಿಸುವಂತೆ ಸಿಎಂ ಸೂಚನೆ ನೀಡಿದ್ದರು.

ಇದನ್ನೂ ಓದಿ :ಅತ್ತಿಬೆಲೆ ಪಟಾಕಿ ದುರಂತ ಪ್ರಕರಣ ಸಿಐಡಿಗೆ ಹಸ್ತಾಂತರ: ಸಿಎಂ ಸಿದ್ದರಾಮಯ್ಯ

Last Updated : Oct 9, 2023, 1:24 PM IST

ABOUT THE AUTHOR

...view details