ಆನೇಕಲ್:ಅತ್ತಿಬೆಲೆ ಪಟಾಕಿ ದುರಂತದಲ್ಲಿ ಸಾವಿನ ಸಂಖ್ಯೆ 16 ಕ್ಕೆ ಏರಿಕೆ. ಸೆಂಟ್ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೆಂಕಟೇಶ್ ಚಿಕಿತ್ಸೆಗೆ ಸ್ಪಂದಿಸದೇ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ.
ಪಟಾಕಿ ಖರೀದಿಸಲು ತನ್ನ ಸ್ನೇಹಿತನೊಂದಿಗೆ ವೆಂಕಟೇಶ್ ಅಂಗಡಿಗೆ ಬಂದಿದ್ದರು. ಇದೇ ಸಂದರ್ಭದಲ್ಲಿ ಪಟಾಕಿ ಸ್ಫೋಟಗೊಂಡಿತ್ತು. ಇದರಿಂದಾಗಿ ತೀವ್ರವಾಗಿ ಗಾಯಗೊಂಡಿದ್ದರು. ಜೊತೆಯಲ್ಲಿದ್ದ ಸ್ನೇಹಿತನ ಬೆನ್ನು, ತಲೆ ಕೈಕಾಲುಗಳಿಗೆ ಬೆಂಕಿ ತಗುಲಿ ಸುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಫೋಟೋ ಗ್ರಾಫರ್ ಕೆಲಸ ಮಾಡುತ್ತಿದ್ದ ವೆಂಕಟೇಶ್ ಬಾಡಿ ಬಿಲ್ಡರ್ ಸಹ ಆಗಿದ್ದರು. ಯಾರದೋ ಕಾರ್ಯಕ್ರಮಕ್ಕೆ ಪಟಾಕಿ ತರಲು ಅಂಗಡಿ ತೆರಳಿದ್ದ ವೇಳೆ ದುರಂತ ನಡೆದು ಜೀವ ಕಳೆದುಕೊಂಡಿದ್ದಾರೆ. ಪಟಾಕಿ ದುರಂತ ಪ್ರಕರಣದಲ್ಲಿ 12 ಜನ ಸಜೀವ ದಹನವಾಗಿದ್ದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೂವರು ಮೃತಪಟ್ಟಿದ್ದರು. ಇಂದು ವೆಂಕಟೇಶ್ ಕೂಡ ಚಿಕಿತ್ಸೆಗೆ ಸ್ಪಂದಿಸದೇ ಪ್ರಾಣಬಿಟ್ಟಿದ್ದಾರೆ.
ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡು ದುರಂತ ಸಂಭವಿಸಿದ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರ ಪರಿಹಾರ ಘೋಷಿಸಿವೆ. 'ಸಂತ್ರಸ್ತರ ಕುಟುಂಬಸ್ಥರಿಗೆ ತಲಾ ಸಾವಿರ 5 ಲಕ್ಷ ರೂ ಪರಿಹಾರ ಕೊಡುವುದಾಗಿ ಕರ್ನಾಟಕ ಸರ್ಕಾರ ಘೋಷಿಸಿದೆ. ಹಾಗೆಯೇ ತಮಿಳುನಾಡು ಸರ್ಕಾರವು ಮೃತರ ಕುಟುಂಬಸ್ಥರಿಗೆ 3 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ 1 ಲಕ್ಷ ಮತ್ತು ಸಾಧಾರಾಣ ಗಾಯಾಳುಗಳಿಗೆ ತಲಾ 50 ಸಾವಿರ ರೂ ಪರಿಹಾರ ವಿತರಿಸಲಾಗುವುದು ಎಂದು ಸಿಎಂ ಎಂ.ಕೆ.ಸ್ಟಾಲಿನ್ ಘೋಷಿಸಿದ್ದರು.