ಬೆಂಗಳೂರು: ಪಾರ್ಟಿ ನೆಪದಲ್ಲಿ ಸ್ನೇಹಿತೆಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ವಿವೇಕನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆದಿತ್ಯ ಮತ್ತು ಅಜಯ್ ಬಂಧಿತ ಆರೋಪಿಗಳು. ನೊಂದ ಯುವತಿಯರು ಹಾಗೂ ಆರೋಪಿ ಯುವಕರು ಉತ್ತರ ಭಾರತದ ಖಾಸಗಿ ಯೂನಿವರ್ಸಿಟಿಯಲ್ಲಿ ಸಹಪಾಠಿಗಳಾಗಿದ್ದು, ಸದ್ಯ ಬೆಂಗಳೂರಿನ ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಆರೋಪಿಗಳು ಫೆಬ್ರವರಿ 5ರ ರಾತ್ರಿ ಪಾರ್ಟಿ ಮಾಡುವ ನೆಪದಲ್ಲಿ ಸ್ನೇಹಿತೆಯರನ್ನು ತಾವು ವಾಸವಿರುವ ವಿವೇಕನಗರದ ಏರಿಯೊಂದಕ್ಕೆ ಕರೆಸಿಕೊಂಡಿದ್ದರು. ಮಧ್ಯರಾತ್ರಿ 2 ಗಂಟೆಯವರೆಗೂ ಮದ್ಯ ಸೇವಿಸಿ ಪಾರ್ಟಿ ಮಾಡಿದ್ದಾರೆ. ಮದ್ಯದ ಅಮಲಿನಲ್ಲಿ 20 ವರ್ಷದ ಯುವತಿಯ ಮೇಲೆ ಓರ್ವ ಆರೋಪಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಅಷ್ಟೇ ಅಲ್ಲ, ಮತ್ತೋರ್ವ ಯುವತಿಯ ಖಾಸಗಿ ಭಾಗಗಳನ್ನು ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರು ದಾಖಲಾಗಿತ್ತು.
ಬಾತ್ರೂಮ್ ಲಾಕ್ ಮಾಡಿಕೊಂಡು ಯುವತಿಯವರು ಬಚಾವ್.. ಸ್ನೇಹಿತರಿಬ್ಬರ ವಿಕೃತಿಗೆ ನೊಂದು ಬಾತ್ರೂಮ್ನಲ್ಲಿ ಲಾಕ್ ಮಾಡಿಕೊಂಡ ಯುವತಿಯರು ಸೋಮವಾರ ಬೆಳಗ್ಗೆ ವಿವೇಕನಗರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ವಿವೇಕನಗರ ಠಾಣಾ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ಕೆಐಎಬಿಯಲ್ಲಿ ಅಕ್ರಮ ಚಿನ್ನ ವಶ:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಪ್ಯಾಂಟ್ ನಲ್ಲಿ ಚಿನ್ನ ಸಾಗಾಣಿಕೆ ಮಾಡುತ್ತಿದ್ದ ಪ್ರಯಾಣಿಕನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಇದೇ 4 ರಂದು ಬಹ್ರೇನ್ ದೇಶದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕ ಆಗಮಿಸಿದ್ದ. ಈ ವೇಳೆ ಪ್ರಯಾಣಿಕನ ಮೇಲೆ ಅನುಮಾನ ಬಂದ ಕಸ್ಟಮ್ಸ್ ಅಧಿಕಾರಿಗಳು ತೀವ್ರ ತಪಾಸಣೆ ನಡೆಸಿದಾಗ ಆತನಲ್ಲಿ ಅಕ್ರಮ ಚಿನ್ನವಿರುವುದು ಪತ್ತೆಯಾಗಿದೆ. ಪ್ರಯಾಣಿಕ ತನ್ನ ಪ್ಯಾಂಟ್ನಲ್ಲಿ ಮತ್ತೊಂದು ಪ್ಯಾಂಟ್ ಪದರವನ್ನು ಹೊಲಿಸಿಕೊಂಡು ಆ ಪ್ಯಾಂಟ್ ಧರಿಸಿ ಅಕ್ರಮ ಚಿನ್ನ ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದಿದೆ. ತಕ್ಷಣ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಪ್ಯಾಂಟ್ ಒಳಪದರದಲ್ಲಿ ಸುಮಾರು 13,46,960 ರೂ. ಮೌಲ್ಯದ 238 ಗ್ರಾಂ ಚಿನ್ನ ಪತ್ತೆಯಾಗಿದೆ. ಕಸ್ಟಮ್ಸ್ ಅಧಿಕಾರಿಗಳಿಂದ ಪ್ರಯಾಣಿಕನ ವಶಕ್ಕೆ ಪಡೆದು ಇನ್ನಷ್ಟು ವಿಚಾರಣೆಯನ್ನು ನಡೆಸಲಾಗುತ್ತಿದೆ.